ಮಡಿಕೇರಿ: ಜಿಲ್ಲೆಯ ಅಲ್ಲಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಗಾಳಿಬೀಡಿನಲ್ಲಿ ವಿನೂತನವಾಗಿ ಎಲ್ಲಾ ಸ್ತ್ರೀಶಕ್ತಿ ಸ್ವಸಹಾಯ ಮಹಿಳಾ ಸಂಘಗಳು ಒಗ್ಗೂಡಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಗುಂಪುಗಳ ವಾರ್ಷಿಕೋತ್ಸವವನ್ನು ಹಬ್ಬದ ವಾತಾವರಣದಲ್ಲಿ ನಡೆಸಿ ಸಂಭ್ರಮಿಸಿದರು
ನವ್ಯ ಸ್ತ್ರೀಶಕ್ತಿ, ನಿರ್ಮಲ ಸ್ತ್ರೀಶಕ್ತಿ, ಶ್ರೀದೇವಿ ಮಹಿಳಾ ಮಂಡಳಿ, ಸ್ವಸಹಾಯ ಗುಂಪುಗಳಾದ ಶ್ರೀನಿಧಿ, ಶ್ರೀಲಕ್ಷ್ಮಿ, ಸೌಭಾಗ್ಯ, ಸಮೃದ್ಧಿ, ತ್ರಿವೇಣಿ, ಭದ್ರಕಾಳಿ ಸಂಘಗಳು ಈ ಸಂಭ್ರಮಕ್ಕೆ ಕಾರಣರಾದರು. ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಸ್ತ್ರೀಶಕ್ತಿಯನ್ನು ಪ್ರದರ್ಶಿಸಿದರು.
ಈ ಸುಂದರ ಸಮಾರಂಭಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಯಾಲದಾಳು ಪದ್ಮಾವತಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಎರಡು ಲಕ್ಷ ರೂಪಾಯಿ ಮಹಿಳಾ ಮಂಡಳಿಯ ಕಟ್ಟಡದ ಉನ್ನತೀಕರಣಕ್ಕೆ ನೀಡಿದರು. ಸುಭಾಷ್ ಸೋಮಯ್ಯ ಅಧ್ಯಕ್ಷರು ಗಾಳಿಬೀಡು ಗ್ರಾ.ಪಂ.ನಿಂದ ರೂ. 50 ಸಾವಿರಗಳನ್ನು ಕಟ್ಟಡದ ಉನ್ನತೀಕರಣಕ್ಕೆ ನೀಡಿ, ಗ್ರಾಮ ಪಂಚಾಯಿತಿಯ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶಾಂತೆಯಂಡ ರವಿ ಕುಶಾಲಪ್ಪ ಆಗಮಿಸಿ ಮಹಿಳೆಯರಿಗೆ ಶುಭ ಹಾರೈಸಿದರು. ಇಂದು ಮಹಿಳೆಯರ ಶಕ್ತಿ ಪ್ರದರ್ಶನವಾಗಿದೆ. ಇದೇ ರೀತಿ ಮಹಿಳೆಯರು ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲೇಸ್ವಾಮಿ ಮಹಿಳೆಯರಿಗೆ ಸಿಗುವ ತರಬೇತಿ ಮತ್ತು ಆದಾಯೋತ್ಪನ್ನ ಚಟುವಟಿಕೆ ಬಗ್ಗೆ ತಿಳಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಮಾತನಾಡಿ, ಪ್ರತಿ ವರ್ಷದಂತೆ ಪ್ರತ್ಯೇಕವಾಗಿ ಸಮಾರಂಭಗಳನ್ನು ಮಾಡುತ್ತಿದ್ದ ಗುಂಪುಗಳ ಮಹಿಳೆಯರು ಈ ದಿನ ಒಗ್ಗೂಡಿರುವದು ಉತ್ತಮ ಬೆಳವಣಿಗೆಯಾಗಿದ್ದು, ಇದು ಮುಂದುವರಿಯಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಣಿ ಮುತ್ತಣ್ಣ, ಸದಸ್ಯರಾದ ಕವಿತ, ಪೂವಮ್ಮ, ರುಕ್ಮಿಣಿ, ಅನಂತಕುಮಾರ್, ಗಣಪತಿ ಸುಭಾಷ್ ಹಾಜರಿದ್ದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ರಾಧ ನಿರೂಪಿಸಿ, ವಿಶಾಲಾಕ್ಷಿ ಪಾರ್ಥಿಸಿ, ಪಾರ್ವತಿ ಸ್ವಾಗತಿಸಿದರೆ, ಗಂಗಮ್ಮ ಹಾಗೂ ಕವಿತಾ ವಂದಿಸಿದರು.
ವೀರಾಜಪೇಟೆ: ಭಾರತ ದೇಶದ ಸಂಸ್ಕøತಿ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ಮೂಲಕ ಪ್ರತಿಯೊಂದು ಹೆಣ್ಣು ಮಗುವಿಗೂ ಶಿಕ್ಷಣ ನೀಡುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ಕೊಡಗು ಮಹಿಳಾ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಸಮಾಜದ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊಡಗು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕುಸುಮ ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಮಹಿಳೆ ಮನೆಯ ಕೆಲಸದಲ್ಲೇ ಹೆಚ್ಚು ತೊಡಗುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹೆಚ್ಚು ಮಹಿಳೆಯರು ಸಂಘ-ಸಂಸ್ಥೆಗಳ ಮೂಲಕ ಸ್ವಂತ ಉದ್ಯೋಗದ ಅಭಿವೃದ್ಧಿಯ ಹಾದಿಯಲ್ಲಿದ್ದಾರೆ ಎಂದರು.
ಈ ಸಂದರ್ಭ ನಿವೃತ್ತ ಪ್ರೋ. ಎನ್.ಸಿ. ನೀಲಮ್ಮ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಮಹಿಳಾ ಸಮಾಜದ ಮೆಟಿಲ್ಡಾ ಲೋಬೊ ಮುಂತಾದವರು ಉಪಸ್ಥಿತರಿದ್ದರು. ಐ.ಎಂ. ಕಾವೇರಮ್ಮ ಸ್ವಾಗತಿಸಿ, ವಂದಿಸಿದರು.
ಸೋಮವಾರಪೇಟೆ: ಮಹಿಳೆಯರು ಶೈಕ್ಷಣಿಕವಾಗಿ ಸಬಲರಾಗದ ಹೊರತು ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರಿಗೆ ಸಮಾನತೆ ದೊರಕಿದ್ದರೂ, ಹೆಚ್ಚಿನವರು ಶೈಕ್ಷಣಿಕವಾಗಿ ಸಬಲೀಕರಣಗೊಳ್ಳದಿರುವದು ವಿಷಾದನೀಯ ಎಂದು ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಭಿಪ್ರಾಯಿಸಿದರು.
ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಮಾತನಾಡಿ, ಮಹಿಳೆಯರ ವಿಚಾರಶಕ್ತಿಗೆ ಸಾಣೆ ಹಿಡಿಯುವಂತಹ ಕೆಲಸ 12ನೇ ಶತಮಾನದಲ್ಲಿಯೇ ಶರಣರು ಮಾಡಿದ್ದಾರೆ. ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಸಂಘಗಳ ಮೂಲಕ ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳಾ ಸಮಾಜ ಮುಖ್ಯವಾಹಿನಿಗೆ ಬಂದಿದ್ದರೂ, ಶೋಷಣೆ ಕೊನೆಗೊಂಡಿಲ್ಲ ಎಂದು ವಿಷಾಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಮೇರಿ ಅಂಬುದಾಸ್ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ, ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕ ವೆಂಕಟೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಉಪಾಧ್ಯಕ್ಷೆ ಸುಮತಿ, ರಾಜ್ಯ ಸಮಿತಿ ನಿರ್ದೇಶಕಿ ರೆಹನಾ ಸುಲ್ತಾನ್, ಇಲಾಖೆಯ ಮೇಲ್ವಿಚಾರಕಿ ಶೀಲಾ ಉಪಸ್ಥಿತರಿದ್ದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸರಳಾಮಣಿ, ಕೆ.ಎ. ಲೀಲಾವತಿ, ಶೈಲ ಹಾಗೂ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ಜೆನಿಫರ್ ತಾರಾ ಲೋಬೋ ಅವರನ್ನು ಸನ್ಮಾನಿಸಲಾಯಿತು.