ಮಡಿಕೇರಿ, ಮಾ.22 : ಕೊಡಗಿನ ಪರಿಸರ ಉಳಿಸುವ ಉದ್ದೇಶದಿಂದ ಮರಕಡಿತಲೆ ಮತ್ತು ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್ ಅವರಿಗೆ ಮನವಿ ಪತ್ರ ಸಲ್ಲಿಸಿರುವದಾಗಿ ಕಾವೇರಿ ಸೇನೆ ಸಂಚಾಲಕ ಕೆ.ಎ.ರವಿ ಚಂಗಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 17 ರಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ನಿವೃತ್ತ ಮೇಜರ್ ಜನರಲ್ ಕೊಡಂದೇರ ಅರ್ಜುನ್ ಮುತ್ತಣ್ಣ, ಬಿಜೆಪಿಯ ತೇಲಪಂಡ ಶಿವ ಕುಮಾರ್ ನಾಣಯ್ಯ, ಚೇಂದ್ರಿಮಾಡ ಗಿರೀಶ್ ದೇವಯ್ಯ ಹಾಗೂ ತಾವು ಜಿಲ್ಲೆಯಲ್ಲಿ ಆಗುತ್ತಿರುವ ಪರಿಸರ ನಾಶದ ಬಗ್ಗೆ ಮನವರಿಕೆ ಮಾಡಿಕೊಟ್ಟಿರುವದಾಗಿ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಅವ್ಯಾಹತ ಮರಗಳ ಹನನ ಮತ್ತು ಕಾವೇರಿ ನದಿ ಹಾಗೂ ಅವುಗಳ ಉಪನದಿಗಳ ಪಾತ್ರದಲ್ಲಿ ನಡೆಯುತ್ತಿರುವ ಅನಧಿಕೃತ ಮರಳು ದಂಧೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಮಳೆಯ ಪ್ರಮಾಣ ಕೂಡ ಕುಸಿಯುತ್ತಿದ್ದು, ಡಿಸೆಂಬರ್ ತಿಂಗಳಿನಲ್ಲಿಯೇ ಜೀವನದಿ ಕಾವೇರಿ ಬರಡಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ಸಂಖ್ಯೆಯ ಮರಗಳನ್ನು ಕಡಿಯಲಾಗಿದೆ. ಉದ್ದೇಶಿತ ಕೇರಳ ಮೈಸೂರು ರೈಲು ಮಾರ್ಗ ಹಾಗೂ ಚತುಷ್ಪಥ ಹೆದ್ದಾರಿ ಯೋಜನೆಗಳಿಂದ ಪರಿಸರ ನಾಶವಾಗಲಿದೆ. ಈ ಕಾರಣದಿಂದ ಎರಡೂ ಯೋಜನೆಗಳಿಗೆ ಅನುಮತಿ ನೀಡಬಾರದೆಂದು ಸಚಿವರಲ್ಲಿ ಒತ್ತಾಯಿಸಿರುವದಾಗಿ ರವಿ ಚಂಗಪ್ಪ ತಿಳಿಸಿ, ಜಿಲ್ಲೆಯ ಗಡಿಭಾಗವಾದ ಕುಶಾಲನಗರದವರೆಗೆ ರೈಲ್ವೆ ಸಂಪರ್ಕ ಕಲ್ಪಿಸುವದಕ್ಕೆ ತಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಘು ಮಾಚಯ್ಯ, ಸೋಮವಾರಪೇಟೆ ಅಧ್ಯಕ್ಷ ಹೊಸಬೀಡು ಶಶಿ ಹಾಗೂ ದಿವಾಕರ್ ಉಪಸ್ಥಿತರಿದ್ದರು.