ಸೋಮವಾರಪೇಟೆ, ಮಾ.22: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 2ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ತಿಳಿಸಿದರು.

ಪ.ಪಂ. ಸಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ನಗರೋತ್ಥಾನ ಯೋಜನೆಯಡಿ 2ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವಂತೆ ಪೌರಾಡಳಿತ ಇಲಾಖೆಯಿಂದ ನಿರ್ದೇಶನ ಬಂದಿದ್ದು, ಅದರಂತೆ ಶಾಸಕರು, ಪ.ಪಂ. ಮುಖ್ಯಾಧಿಕಾರಿಗಳನ್ನು ಒಳಗೊಂಡ ತಂಡ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

ನಗರೋತ್ಥಾನ ಯೋಜನೆಯ 3ನೇ ಹಂತದ ವಿಶೇಷ ಅನುದಾನದಲ್ಲಿ ಶೇ. 17.15ರಷ್ಟನ್ನು (35ಲಕ್ಷ) ಪರಿಶಿಷ್ಟ ಜಾತಿಯವರ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಶೇ. 6.95ರಂತೆ (13.90ಲಕ್ಷ)ವನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗೆ 30ಲಕ್ಷ, ರಸ್ತೆ ಮತ್ತು ಚರಂಡಿ ಕಾಮಗಾರಿಗೆ 84.77ಲಕ್ಷ, ಮಳೆ ನೀರು ಚರಂಡಿ ಕಾಮಗಾರಿಗೆ 11.33ಲಕ್ಷ, ಇತರೆ ಅಭಿವೃದ್ಧಿ ಕಾಮಗಾರಿಗೆ 25ಲಕ್ಷ ಹಣವನ್ನು ಕಾಯ್ದಿರಿಸಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು.

ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಜನತಾ ಕಾಲೋನಿಯಲ್ಲಿ ವಾಸ ಮಾಡುತ್ತಿರುವವರಿಗೆ ಜಾಗದ ಹಕ್ಕು ಪತ್ರ ಇಲ್ಲದೇ ಇರುವದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪಂಚಾಯಿತಿಯಿಂದಲೇ ಫಲಾನುಭವಿಗಳ ಪಟ್ಟಿ ತಯಾರಿಸಿ ಹಕ್ಕು ಪತ್ರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ.ಪಂ.ನ ವಾಣಿಜ್ಯ ಮಳಿಗೆಗಳಲ್ಲಿ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಮಳಿಗೆಗಳ ಮೇಲ್ಭಾಗ ಲೀಕ್ ಪ್ರೂಫ್ ಪೇಯಿಂಟ್ ಬಳಿಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಶೀಘ್ರವಾಗಿ ಕ್ರಿಯಾಯೋಜನೆ ತಯಾರಿಸಿ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಭಿಯಂತರ ವೀರೇಂದ್ರ ಅವರಿಗೆ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಸೂಚಿಸಿದರು.

ಪ.ಪಂ. ವ್ಯಾಪ್ತಿಯ ಮಹದೇಶ್ವರ ಬಡಾವಣೆಯಲ್ಲಿ ಕಾಯ್ದಿರಿಸಲಾಗಿರುವ ನಿವೇಶನದ ದಾಖಲಾತಿಗಳನ್ನು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ನೀಡುವ ಬಗ್ಗೆ ಚರ್ಚೆ ನಡೆದು, ಕಾಯ್ದಿರಿಸಿರುವ ಜಾಗವನ್ನು ಹಿಂದುಳಿದ ವರ್ಗಗಳ ಇಲಾಖೆಗೆ ಹಸ್ತಾಂತರಿಸಲು ಒಪ್ಪಿಗೆ ನೀಡಲಾಯಿತು.