ಸುಂಟಿಕೊಪ್ಪ, ಮಾ. 21: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ಕೈಗೊಂಡ ತಡೆಗೋಡೆ ಕಾಮಗಾರಿಯನ್ನು ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಕೆದಕಲ್ ಗ್ರಾಮದ ಅರಿಯನ ಮನೆಗೆ ತೆರಳುವ ರಸ್ತೆಗೆ ತಡೆಗೋಡೆ ಇಲ್ಲದೆ ಆಗಾಗ ಜರಿದು ಬೀಳುತ್ತಿದ್ದು, ಈ ಭಾಗದ ಜನರಿಗೆ ಇದರಿಂದ ತೊಂದರೆ ಅನುಭವಿಸುತ್ತಿದ್ದರು. ತಾಲೂಕು ಪಂಚಾಯಿತಿ ಅನುದಾನದಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದೆ. ತನಗೆ ಮೀಸಲಿರಿಸಿದ ಅನುದಾನವನ್ನು 3 ಗ್ರಾಮ ಪಂಚಾಯಿತಿಗಳಿಗೆ ಸಮಾನವಾಗಿ ಹಂಚಲಾಗಿದೆ. ಮುಂದಿನ ಸಾಲಿನ ಅನುದಾನದಲ್ಲಿ ಉಳಿದ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವದು ಎಂದು ತಿಳಿಸಿದರು.
ಈ ಸಂದರ್ಭ ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಯ್ಯ, ಕೆದಕಲ್ ಗ್ರಾಮದ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್ ರೈ, ಗುತ್ತಿಗೆದಾರ ಅಂಬುದಾಸ್, ಅರಿಯನ ಮನೆ ರಾಜು, ಸರಸ್ವತಿ, ಆರ್. ಸತೀಶ್, ಮಂಜು, ಹಾಜರಿದ್ದರು.