ಸೋಮವಾರಪೇಟೆ, ಮಾ. 21: ಲೋಕೋಪಯೋಗಿ ಇಲಾಖೆಗೆ ಸೇರಿದ ಸೋಮವಾರಪೇಟೆ-ಶಾಂತಳ್ಳಿ ಮುಖ್ಯರಸ್ತೆಯ ಯಡೂರು ಗ್ರಾಮದ ಕೆರೆ ಬಳಿ ರಸ್ತೆ ಕುಸಿಯುವ ಭೀತಿ ಎದುರಾಗಿದ್ದು, ತಕ್ಷಣ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಯಡೂರು ಗ್ರಾಮಾಭಿವೃದ್ಧಿ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾನುಪ್ರಕಾಶ್, ಯಡೂರು ಗ್ರಾಮದಲ್ಲಿ ಇತ್ತೀಚೆಗೆ ಕೆರೆಯ ಹೂಳೆತ್ತಲಾಗಿದ್ದು, ನೀರು ಶೇಖರಣೆಗೊಳ್ಳುತ್ತಿದೆ. ಇದರಿಂದ ರಸ್ತೆಯ ಒಂದು ಬದಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ ಎಂದರು.

ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಇದೀಗ ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯಿಂದ ತಡೆಗೋಡೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಭಾನುಪ್ರಕಾಶ್ ತಿಳಿಸಿದರು.

ಶಾಂತಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ ಸೇರಿದಂತೆ ಇತರ ಪ್ರದೇಶಗಳಿಗೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು, ಪ್ರವಾಸೋದ್ಯಮಕ್ಕೂ ಇದೇ ಮಾರ್ಗವಾಗಿದೆ.

ಒಂದು ವೇಳೆ ರಸ್ತೆ ಕುಸಿತಕ್ಕೊಳಗಾದರೆ ಸಂಪರ್ಕ ಕಡಿತಗೊಳ್ಳಲಿದೆ ಈ ಹಿನ್ನೆಲೆ ಮಳೆಗಾಲದೊಳಗೆ ತಡೆಗೋಡೆ ನಿರ್ಮಿಸಬೇಕಿದೆ. ತಪ್ಪಿದಲ್ಲಿ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಎ.ವಿ. ಕಾರ್ತಿಕ್, ಗ್ರಾಮಸ್ಥರಾದ ವೈ.ಪಿ. ಲೋಕೇಶ್, ಡಿ.ಸಿ. ರಾಜು, ಪಿ.ಹೆಚ್. ಪ್ರವೀಣ್ ಉಪಸ್ಥಿತರಿದ್ದರು.