ಸೋಮವಾರಪೇಟೆ,ಮಾ.20: ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿಯ ಬಿಜಿಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿದ್ದ 2ನೇ ವರ್ಷದ ಹಿಂದೂ ಕಪ್ ಫುಟ್ಬಾಲ್ ಪಂದ್ಯಾಟದ ಮಹಿಳೆಯರ ವಿಭಾಗದಲ್ಲಿ ಕೊಡಗು ಮಹಿಳಾ ಸಹಕಾರ ಸಂಸ್ಥೆಯ ಮಡಿಕೇರಿ ತಂಡ ಪ್ರಥಮ ಸ್ಥಾನ ಗಳಿಸಿತು. ಕುಶಾಲನಗರ ತಂಡ 2-1 ಗೋಲುಗಳ ಅಂತರದಿಂದ ಸೋಲನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಹಿಂದೂ ಗೆಳೆಯರ ಬಳಗದಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಫುಟ್ಬಾಲ್ ಪಂದ್ಯಾಟ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು. ಮೈದಾನದ ಸ್ವಚ್ಛತೆಗೆ ಆದ್ಯತೆ ನೀಡುವದರೊಂದಿಗೆ ಸಾವಿರಾರು ಕ್ರೀಡಾಪ್ರೇಮಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಗೆಳೆಯರ ಬಳಗದಿಂದ ಸಹಾಯಧನ: ಫುಟ್ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಕಲಚೇತನರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಿಂದೂ ಗೆಳೆಯರ ಬಳಗದ ವತಿಯಿಂದ ಸಹಾಯ ಧನ ನೀಡಲಾಯಿತು.
ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೆ ಒಳಗಾಗಿರುವ ಕೂಗೂರು ಗ್ರಾಮದ ಅರುಣ ಅವರು ಹಾಸಿಗೆಯಲ್ಲಿಯೇ ದಿನದೂಡುತ್ತಿದ್ದು, ಇವರ ಪತ್ನಿ ಪವಿತ್ರ, ಪಾಶ್ರ್ವವಾಯು ಪೀಡಿತರಾಗಿರುವ
(ಮೊದಲ ಪುಟದಿಂದ) ದೊಡ್ಡಮಳ್ತೆಯ ರಮೇಶ್ ಅವರುಗಳಿಗೆ ಸಹಾಯ ಧನ ನೀಡಲಾಯಿತು.
ಇದರೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಗತಿ, ಮಲ್ಲೇಶ್ವರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ನಿರಂಜನ್ ಅವರುಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.