ಮಡಿಕೇರಿ, ಮಾ. 20: ಕ್ರೀಡಾ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಒಂದಲ್ಲಾ ಒಂದು ಕ್ರೀಡೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಅಂತರ್ರಾಷ್ಟ್ರಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಕೀರ್ತಿ ತಂದಿದ್ದಾರೆ. ಅಥ್ಲೆಟಿಕ್ಸ್, ಹಾಕಿ, ಬ್ಯಾಡ್ಮಿಂಟನ್, ಟೆನ್ನಿಸ್, ಸ್ಕ್ವಾಷ್, ಬಾಸ್ಕೆಟ್ಬಾಲ್, ಕ್ರಿಕೆಟ್, ಬಾಕ್ಸಿಂಗ್ನಂತಹ ವಿವಿಧ ಕ್ರೀಡೆಗಳ ಸಾಲಿಗೆ ಥ್ರೋಬಾಲ್ನಲ್ಲಿ ಜಿಲ್ಲೆಯ ಆಟಗಾರ್ತಿಯರಿಬ್ಬರು ಇದೀಗ ದೇಶವನ್ನು ಪ್ರತಿನಿಧಿಸಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಮೂಲತಃ ನಾಪೋಕ್ಲುವಿನ ಯುವತಿ ಬೆಂಗಳೂರಿನಲ್ಲಿ ನೆಲಸಿರುವ ಬೊಪ್ಪಂಡ ರೀಮಾ ಅಪ್ಪಚ್ಚು ಹಾಗೂ ಸೋಮವಾರಪೇಟೆಯ ರೀತಾ ಎಲ್ ಜಯಣ್ಣ ಈ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಭಾರತ ಹಾಗೂ ಇಂಡೋನೇಷಿಯಾ ತಂಡಗಳ ನಡುವೆ ಇಂಡೋನೇಷಿಯಾದಲ್ಲಿ ನಡೆದ ದ್ವಿರಾಷ್ಟ್ರಗಳ ಥ್ರೋಬಾಲ್ ಪಂದ್ಯಾವಳಿ ಯಲ್ಲಿ ಭಾರತ ತಂಡವನ್ನು ಇವರು ಪ್ರತಿನಿಧಿಸಿದ್ದು, ಭಾರತ ತಂಡ ಪ್ರಶಸ್ತಿಗೆ ಭಾಜನವಾಗಿದೆ. ಮುಂದಿನ ಪಂದ್ಯಾವಳಿಗೆ ಬೆಂಗಳೂರಿನಲ್ಲಿ ಶಿಬಿರ ನಡೆಯುತ್ತಿದ್ದು, ರೀಮಾ ಈ ಶಿಬಿರಕ್ಕೂ ಆಯ್ಕೆಯಾಗಿದ್ದಾಳೆ.
ಕಳೆದ 10 ವರ್ಷಗಳಿಂದ ರೀಮಾ ಥ್ರೋಬಾಲ್ನಲ್ಲಿ ಗುರುತಿಸಿಕೊಂಡಿದ್ದು, ಕರ್ನಾಟಕ ತಂಡದ ಮೂಲಕ ದೇಶ ವನ್ನು ಪ್ರತಿನಿಧಿಸಿದ್ದಾಳೆ. ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ರೀಮಾ ಪ್ರಸ್ತುತ ಬೆಂಗಳೂರಿನ ಕ್ಯಾಂಪ್ನಲ್ಲಿ ದ್ದಾರೆ. ಈ ತಿಂಗಳಾಂತ್ಯಕ್ಕೆ ಪಾಣಿಪತ್ ನಲ್ಲಿ ರಾಷ್ಟ್ರೀಯ ಪಂದ್ಯಾವಳಿ ನಡೆಯಲಿದ್ದು, ಇದು ಥ್ರೋಬಾಲ್ ಆಟಗಾರ್ತಿಯರಿಗೆ ಪ್ರತಿಷ್ಠಿತವಾದ ಪಂದ್ಯಾವಳಿಯಾಗಿದೆ. ಪ್ರಸ್ತುತ ಭಾರತ ತಂಡದಲ್ಲಿ ಈಕೆ ಸ್ಥಾನ ಪಡೆದಿದ್ದರೂ, ರಾಷ್ಟ್ರೀಯ ಪಂದ್ಯಾವಳಿ ಅತ್ಯಂತ ಪ್ರತಿಷ್ಠಿತವಾದದ್ದು ಇದರಲ್ಲಿ ತಾನು ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿ ರುವದಾಗಿ ರೀಮಾ ‘ಶಕ್ತಿ’ಯೊಂದಿಗೆ ತಿಳಿಸಿದಳು.
ರಾಷ್ಟ್ರೀಯ ಪಂದ್ಯಾವಳಿಯ ಬಳಿಕ ಮೇ ಅಥವಾ ಜೂನ್ ತಿಂಗಳಿನಲ್ಲಿ ಏಷ್ಯಾ ಕಪ್ ಪಂದ್ಯಾವಳಿ ಜರುಗಲಿದ್ದು, ಈ ಪಂದ್ಯಾವಳಿ ಯಲ್ಲಿಯೂ ಸಾಧನೆ ತೋರುವದು ತಮ್ಮ ಮುಂದಿನ ಗುರಿ ಎಂದು ರೀಮಾ ಅಪ್ಪಚ್ಚು ಅಭಿಪ್ರಾಯ ಹಂಚಿ ಕೊಂಡಳು. ಐಪಿಎಲ್ ಮಾದರಿಯಲ್ಲಿ ಏಪ್ರಿಲ್ನಲ್ಲಿ ಮುಂಬೈಯಲ್ಲಿ ಥ್ರೋಬಾಲ್ ಲೀಗ್ ನಡೆಯಲಿದ್ದು, ಇದರ ಜನಪ್ರಿಯತೆಗಾಗಿ ಇತ್ತೀಚೆಗೆ ನಡೆದ ಪಂದ್ಯಾವಳಿಯಲ್ಲಿ ರೀಮಾ ಅತಿಥಿ ಆಟಗಾರ್ತಿಯಾಗಿ ಪಾಲ್ಗೊಂಡಿದ್ದಳು.
ರೀಮಾ ಹಾಕಿಯಲ್ಲಿ ಸಾಧನೆ ತೋರಿರುವ ನಾಪೋಕ್ಲುವಿನ ದಿವಂಗತ ಅಪ್ಪಚ್ಚು (ಜಯ) ಹಾಗೂ ರಾಷ್ಟ್ರೀಯ ಟೆನ್ನಿಸ್ಬಾಲ್ ಆಟಗಾರ್ತಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಸೀತಮ್ಮ ದಂಪತಿಯ ಪುತ್ರಿ.
ಇಂಡೋನೇಷಿಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಸೋಮವಾರಪೇಟೆಯ ರೀತಾ ಎಲ್. ಜಯಣ್ಣ ಅವರೂ ಪ್ರತಿನಿಧಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಶಿಬಿರದಲ್ಲಿ ರೀಮಾ ಮಾತ್ರ ತರಬೇತಿ ಪಡೆಯುತ್ತಿದ್ದಾಳೆ.