ಶ್ರೀಮಂಗಲ, ಮಾ. 19: ಒಂದು ಕಡೆ ಟಿಪ್ಪು ಸುಲ್ತಾನನಿಂದ ಕೊಡವರ ಸಾಮೂಹಿಕ ಹತ್ಯಾಕಾಂಡ, ನಿರಂತರ ದಾಳಿ, ಮತಾಂತರ ಇದರ ನಡುವೆ ಕೊಡಗನ್ನಾಳುತ್ತಿದ್ದ ರಾಜರಿಂದ ನಿರಂತರ ರಕ್ತಪಾತ, ಕೂಪಮಂಡೂಕದ ಸ್ಥಿತಿ, ರಾಜ ನಡೆಸಿದ ನಿರಂತರ ದಬ್ಬಾಳಿಕೆ, ಸಾಮೂಹಿಕ ಹತ್ಯಾಕಾಂಡ, ಕ್ರೌರ್ಯ ಹಾಗೂ ದೌರ್ಜನ್ಯದಿಂದ ಕೊಡವರು ನಿರ್ನಾಮವಾಗುವದನ್ನು ತಪ್ಪಿಸಲು, ತಮ್ಮ ಜನಾಂಗದ ರಕ್ಷಣೆಗಾಗಿ ಬ್ರಿಟಿಷ್ ಆಳ್ವಿಕೆಯ ಪೂರ್ವದಲ್ಲಿ ದಿವಾನರಾಗಿದ್ದ ಚೆಪ್ಪುಡೀರ ಪೊನ್ನಪ್ಪ ಹಾಗೂ ಅಪ್ಪಾರಂಡ ಬೋಪು ಅವರು ಬ್ರಿಟಿಷರ ಆಡಳಿತವನ್ನು ಒಪ್ಪಿಕೊಳ್ಳಬೇಕಾಯಿತು ಎಂದು ದಿವಾನ್ ಚೆಪ್ಪುಡೀರ ಪೊನ್ನಪ್ಪ ಅವರ ಜೀವನ ಚರಿತ್ರೆಯ ಬಗ್ಗೆ ಕೃತಿ ರಚಿಸಿರುವ ಐತಿಚಂಡ ರಮೇಶ್ ಉತ್ತಪ್ಪ ವಿಶ್ಲೇಷಿಸಿದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಚೆಪ್ಪುಡೀರ ಕುಟುಂಬ ಹಾಗೂ ಕೊಡವ ಮಕ್ಕಡ ಕೂಟ ಸಂಯುಕ್ತ ಆಶ್ರಯದಲ್ಲಿ ದಿವಾನ್ ಚೆಪ್ಪುಡೀರ ಪೊನ್ನಪ್ಪ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದಿವಾನ್ ಪೊನ್ನಪ್ಪ, ದಿವಾನ್ ಬೋಪು ಅವರಿಬ್ಬರು ಕೊಡಗಿನಲ್ಲಿ ಬ್ರಿಟಿಷ್ ಸರ್ಕಾರ ಬರಲು ನೆರವು ನೀಡಿದರು ಎಂದು ಕೆಲವರು ಪೂರ್ವಾಗ್ರಹ ಪೀಡಿತರಾಗಿ ಟೀಕಿಸುತ್ತಿರುವದರಲ್ಲಿ ಸತ್ಯಾಂಶವಿಲ್ಲ. ಅಂದಿನ ಕೊಡಗಿನ ಪರಿಸ್ಥಿತಿಯನ್ನು, ರಾಜಕೀಯ, ಸಾಮಾಜಿಕ, ಭೌಗೋಳಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ನೋಡಿ ತಮ್ಮ ಮನಸ್ಸಿನ ಅಸಹನೆಯನ್ನು ತೋರ್ಪಡಿಸಿಕೊಳ್ಳುತ್ತಿರುವ ಪರಿಸ್ಥಿತಿ ಕಂಡುಬರುತ್ತಿದೆ ಎಂದು ಹೇಳಿದರು. ಚಿಕ್ಕವೀರರಾಜೇಂದ್ರನ ಅಜ್ಞಾನವೇ ಕೊಡಗಿನಲ್ಲಿ ಅರಸರ ಆಳ್ವಿಕೆಗೆ ಅಂತ್ಯ ಹಾಡಿತ್ತು. ನಿಜ ಸ್ಥಿತಿಯನ್ನು ತಿಳಿಸಿದ ಪೊನ್ನಪ್ಪ ಹಾಗೂ ಬೋಪು ದಿವಾನ್ ಅವರ ಮಾತು ಆತನಿಗೆ ರುಚಿಸಲಿಲ್ಲ. ಅದರಲ್ಲಿಯೂ ಕೊಡಗಿನಲ್ಲಿ ಅತ್ಯಂತ ಪ್ರಭಾವಿಯಾಗಿದ್ದ, ಲೋಕ ಜ್ಞಾನ ತಿಳಿದಿದ್ದ ಆಡಳಿತದಲ್ಲಿ ನೈಪುಣ್ಯ ಹೊಂದಿದ್ದ ದಿವಾನ್ ಪೊನ್ನಪ್ಪ ಅವರನ್ನು ರಾಜ ಹಾಗೂ ಕುಂಟ ಬಸವ ನಿರ್ಲಕ್ಷಿಸಿದ್ದ ಪ್ರತಿಫಲವೇ ರಾಜರ ಆಳ್ವಿಕೆ ಕೊನೆಕೊಳ್ಳುವಂತಾಯಿತು ಎಂದು ವಿವರಿಸಿದರು.
ಚೆಪ್ಪುಡೀರ ಕುಟುಂಬದ ಹಿರಿಯರಾದ ಚೆಪ್ಪುಡೀರ ಪೊನ್ನಪ್ಪ ಅವರು ಪ್ರಸ್ತಾವಿಕವಾಗಿ ಮಾತನಾಡಿ ಅಂದು ತಮ್ಮ ಶ್ರೀಮಂತಿಕೆ ಹಾಗೂ ಹೃದಯ ವೈಶಾಲ್ಯಕ್ಕೆ ಮುಂದಾಗಿ ರಾಜನ ಕೆಂಗಣ್ಣಿಗೆ ಬಿದ್ದು ಚೆಪ್ಪುಡೀರ ಮನೆತನ ಸಂಕಷ್ಟವನ್ನು ಎದುರಿಸಿತ್ತು. ತನ್ನ ಸರಿಸಮಾನವಾಗಿ ಕೊಡವ ಕುಟುಂಬದವರೂ ಇದ್ದ್ದಾರೆ ಹಾಗೂ ತನ್ನನ್ನು ಬಿಟ್ಟು ಮತ್ತೊಬ್ಬರನ್ನು ಜನರು ಹೊಗಳುತ್ತಿರುವದನ್ನು ಸಹಿಸಲಾಗದೆ ಅವರ ಕುಟುಂಬವನ್ನೇ ನಾಶ ಮಾಡಲು ಮುಂದಾದ ಹೀನ ಕೃತ್ಯ ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದ ಅವರು ಚೆಪ್ಪುಡೀರ ಕುಟುಂಬದ ಕುಡಿ ದಿವಾನನಾದ ಬಗ್ಗೆ ವಿವರಿಸಿದರು.
ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಹ್ಯಾರಿ ದೇವಯ್ಯ ಮಾತನಾಡಿ ದಿವಾನ್ ಚೆಪ್ಪುಡೀರ ಪೊನ್ನಪ್ಪ ಇತಿಹಾಸದಲ್ಲಿ ಪ್ರಖ್ಯಾತರಾದ ವ್ಯಕ್ತಿ, ತಮ್ಮ ದಿಟ್ಟ ನಿಲುವು, ತೆಗೆದುಕೊಳ್ಳುತ್ತಿದ್ದ ನಿರ್ಧಾರ, ನಾಯಕತ್ವ ಗುಣ, ಪರೋಪಕಾರಿ, ಚಾಣಕ್ಯ ರಾಜಕೀಯ ನೀತಿಯಿಂದಾಗಿ ಗಮನ ಸೆಳೆದಿದ್ದರು. ರಾಜನನ್ನು ವಿನಾಃಕಾರಣ ಹೊಗಳಿ ಅಟ್ಟಕೇರಿಸದೆ ವಾಸ್ತವವನ್ನು ತಿಳಿಸಿ ಎಚ್ಚರಿಸುತ್ತಿದ್ದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಚೆಪ್ಪುಡೀರ ಪೊನ್ನಪ್ಪ ಕೂಡ ಒಬ್ಬರು ಎಂದರು.
ರಾಜನ ದುರಾಡಳಿತ, ಕ್ರೌರ್ಯ ದೌರ್ಜನ್ಯ, ಸಾಮೂಹಿಕ ಹತ್ಯಾಕಾಂಡದಿಂದ ಕೊಡವರು ಜರ್ಝುರಿತರಾಗಿದ್ದ ಕಾಲಘಟ್ಟದಲ್ಲಿ ಕೊಡವರ ರಕ್ಷಣೆಗೆ ಬ್ರಿಟಿಷರು ಕೊಡಗು ಜಿಲ್ಲೆಯಲ್ಲಿ ಆಡಳಿತಕ್ಕೆ ಬಂದು ಕೊಡವರನ್ನು ರಕ್ಷಿಸಿದರು ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜೀರ ಅಯ್ಯಪ್ಪ ಮಾತನಾಡಿ ಕೊಡವ ಸಾಧಕರು, ಕೊಡವಾಮೆ ಬಗ್ಗೆ ಹಲವು ಪುಸ್ತಕ ಹೊರತರಲಾಗಿದೆ. ಕೊಡವ ಭಾಷಾ ಬರಹಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೊಡವ ಮಕ್ಕಡ ಕೂಟದಿಂದ ಇದುವರೆಗೆ 11 ಪುಸ್ತಕವನ್ನು ಹೊರತರಲಾಗಿದೆ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಕೊಡವರಲ್ಲಿ ಬರೆದು ದಾಖಲು ಮಾಡುವ ಅಭ್ಯಾಸ ಕಡಿಮೆ ಇದೆ. ಬರಹ ರೂಪದಲ್ಲಿ ದಾಖಲಿಸುವ ವ್ಯವಸ್ಥೆ ಮಾಡಬೇಕು. ಕೊಡವರ ಸಾಧನೆ, ಸಾಧಕರು ಬಹಳಷ್ಟಿದ್ದರೂ ದಾಖಲೆ ರೂಪದಲ್ಲಿ ಇಲ್ಲವಾಗಿದೆ. ಎಲ್ಲಾ ಕಾಲದಲ್ಲೂ ಕೊಡವರು ನಿಷ್ಠೆ ಹಾಗೂ ಪ್ರಾಮಾಣಿಕತೆ ಹೊಂದಿರುವದನ್ನು ಕಾಣುತ್ತದೆ. ಆದ್ದರಿಂದ ಇಂದಿಗೂ ತಮ್ಮ ರಾಜ, ನಾಯಕ ಅಥವಾ ದನಿಗಳಿಗೆ ಉತ್ತಮ ಸಂಗಡಿಗರಾಗಿದ್ದರು. ಇದರಿಂದ ಇಂದಿಗೂ ಆಳ್ವಿಕೆ ಮಾಡಲು ಮುಂದಾಗದೆ ಇತರರಿಂದ ಅಳ್ವಿಕೆ ಮಾಡಿಸಿಕೊಳ್ಳುವ ಸ್ಥಿತಿಗೆ ಹೆಗಲು ಒಡ್ಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಚೆಪ್ಪುಡೀರ ಕುಟುಂಬದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು.
ಚೆಪ್ಪುಡೀರ ಕುಟುಂಬದ ಪಟ್ಟೆದಾರ ಚೆಪ್ಪುಡೀರ ಕೆ.ಅಯ್ಯಪ್ಪ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಕುಟುಂಬದ ಹಿರಿಯರಾದ ಚೆಪ್ಪುಡೀರ ಬಬ್ಬು ಕಾರ್ಯಪ್ಪ, ಚೆಪ್ಪುಡೀರ ಬೋಜಿ ಕುಟ್ಟಪ್ಪ, ಚೆಪ್ಪುಡೀರ ಕುಟುಂಬದ ಉತ್ತಮ ಜೀವನ ಸಂಘದ ಅಧ್ಯಕ್ಷ ಚೆಪ್ಪುಡೀರ ಕಾರ್ಯಪ್ಪ, ಹಾಜರಿದ್ದರು. ಕಾರ್ಯಕ್ರಮದ ಸಂಚಾಲಕ ರಾಕೇಶ್ ದೇವಯ್ಯ ಕಾರ್ಯಕ್ರಮ ನಿರ್ವಹಿಸಿ, ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು.
ಚೆಪ್ಪುಡೀರ ಉತ್ತಪ್ಪ ಪ್ರಾರ್ಥಿಸಿ, ಪೊನ್ನಪ್ಪ ಸ್ವಾಗತಿಸಿ, ಹ್ಯಾರಿ ದೇವಯ್ಯ ವಂದಿಸಿದರು.