ಮಡಿಕೇರಿ, ಮಾ. 16 : ಅಸ್ಸಾಂ ಮೂಲದವರೆಂದು ಹೇಳಲಾಗುವ ಅಧಿಕ ಸಂಖ್ಯೆಯ ತೋಟ ಕಾರ್ಮಿಕರ ಸಹಿತ ಕೊಡಗಿನ ಕಾಡಿನಂಚಿನಲ್ಲಿ ನೆಲೆಸಿರುವ ಆದಿವಾಸಿಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಬಡವರನ್ನು ಸೆಳೆಯುವ ದಿಕ್ಕಿನಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಸತತ ಐದು ವರ್ಷಗಳಿಂದ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳುವ ಯತ್ನದಲ್ಲಿ ತೊಡಗಿದ್ದಾನೆ ಎಂದು ಊಹಿಸಲಾಗಿದೆ.
ಈ ಹಿಂದೆ ಕರ್ನಾಟಕದ ಆಂಧ್ರ ಗಡಿಭಾಗದ ರಾಯಚೂರು, ಪಾವಗಡ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆ ಬೇರೂರುವದರೊಂದಿಗೆ ಮಲೆನಾಡು ಪ್ರದೇಶದ ಚಿಕ್ಕಮಗಳೂರು, ಉಡುಪಿ ಮುಂತಾದೆಡೆಗಳಲ್ಲಿ ತನ್ನ ಕಾರ್ಯ ವಿಸ್ತಾರಗೊಳಿಸಿದ್ದ ಬೆನ್ನಲ್ಲೇ; ರಾಜಕೀಯ ನೆರಳಿನಲ್ಲಿ ಕೆಲವರು ಶಸ್ತ್ರ ತ್ಯಜಿಸಿದ್ದರೆ; ಆ ಮಂದಿ ಸಮಾಜದ ನಡುವೆ ಇದ್ದುಕೊಂಡು ನಕ್ಸಲೀಯ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವದು ದೃಢಪಟ್ಟಿದೆ.
ಹೀಗಾಗಿ ಕೇರಳದಲ್ಲಿ ಎಡಪಂಥೀಯ ಮಂದಿಯ ನೆರಳಿನಲ್ಲಿ ಕಾರ್ಯಾಚರಿಸುತ್ತಿರುವ ನಕ್ಸಲರು, ಕರ್ನಾಟಕದಲ್ಲಿ ಪ್ರಸಕ್ತ ಮುಂದಾಳತ್ವ ಹೊಂದಿರುವ ವಿಕ್ರಂಗೌಡನನ್ನು ಮುಂದಿಟ್ಟುಕೊಂಡು ಕೊಡಗಿನಲ್ಲಿ ಕಾರ್ಮಿಕರನ್ನು ಓಲೈಸಿಕೊಳ್ಳುವ ಶತಪ್ರಯತ್ನದೊಂದಿಗೆ ನಕ್ಸಲೀಯ ಚಟುವಟಿಕೆ ವಿಸ್ತಾರ ಗೊಳಿಸಲು ಮೇಲಿಂದ ಮೇಲೆ ಯತ್ನಿಸುತ್ತಿರುವದಾಗಿ ಉನ್ನತಮಟ್ಟದ ತನಿಖೆಯಿಂದ ಸುಳಿವು ಲಭಿಸಿರುವದು ಖಾತರಿಯಾಗಿದೆ.
ಭೌಗೋಳಿಕ ಹಿನ್ನೆಲೆ : ಕೊಡಗು ಅತ್ಯಂತ ಸೂಕ್ಷ್ಮ ಜಿಲ್ಲೆಯೊಂದಿಗೆ ತೀರಾ ಕಾಡುಮೇಡುಗಳಿಂದ ಸುತ್ತುವರಿಯ ಲ್ಪಟ್ಟಿರುವ ಭೌಗೋಳಿಕ ಪರಿಸರದಿಂದ ಕೂಡಿರುವ ಬಗ್ಗೆ ಅರಿತಿರುವ ನಕ್ಸಲೀಯರು; ನೆರೆಯ ಕೇರಳ ವಯನಾಡು ಜಿಲ್ಲೆಯನ್ನು ಕೇಂದ್ರೀಕರಿಸಿ; ಕೊಡಗಿನಲ್ಲಿ ಚಟುವಟಿಕೆಗೆ ಹಾತೊರೆಯುತ್ತಿರುವ ಬಗ್ಗೆಯೂ ನಕ್ಸಲ್ ನಿಗ್ರಹದಳ ಮಾಹಿತಿ ಕಲೆ ಹಾಕಿದೆ. ಈ ಸೂಕ್ಷ್ಮ ಸಮಾಜ ಘಾತುಕ ಚಟುವಟಿಕೆಯನ್ನು ಸವಾಲಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಗೆ ಕೂಡ ಎರಡು ಜಿಲ್ಲೆಗಳ ಉನ್ನತ ಮಟ್ಟದ ಅಧಿಕಾರಿಗಳ ನಿರಂತರ ಸಂಪರ್ಕದೊಂದಿಗೆ ನಕ್ಸಲರನ್ನು ಹತ್ತಿಕ್ಕಲು ವಿಶೇಷ ರಣನೀತಿ ರೂಪಿಸುತ್ತಿರುವದಾಗಿ ವಿಶ್ವಾಸನೀಯ ಮೂಲಗಳು ಖಚಿತಪಡಿಸಿದೆ.
ಚುನಾವಣಾ ಕಾಲ ಗಣನೆ : ಇನ್ನು ನಕ್ಸಲೀಯರು ಚುನಾವಣಾ ವರ್ಷದಲ್ಲಿ ಎಡಪಂಥೀಯ ರಾಜಕೀಯ ನೆರಳಿನಲ್ಲಿ ಕಾರ್ಯ ವಿಸ್ತಾರಕ್ಕೆ ವಿಫಲ ಯತ್ನ ನಡೆಸುವದು; ಕೊಡಗಿನಲ್ಲಿ ಈಗಾಗಲೇ ಖಾತರಿಯಾಗಿದೆ ಎಂದು ತನಿಖಾ ಸಂಸ್ಥೆಗಳು ದೃಢಪಡಿಸಿವೆ; ಕರ್ನಾಟಕ ವಿಧಾನಸಭೆಗೆ 2012ರಲ್ಲಿ ಚುನಾವಣೆ ಘೋಷಣೆಯಾಗುತ್ತಲ್ಲೇ; ಶಾಸಕರೊಬ್ಬರ ಹುಟ್ಟೂರು ಕಾಲೂರಿನಲ್ಲಿ ನಕ್ಸಲರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಈ ಸಂದರ್ಭ ಸ್ವತಃ ವಿಕ್ರಂಗೌಡ ತನ್ನ ಪತ್ನಿ; ನಕ್ಸಲೀಯ ಚಟುವಟಿಕೆಯಲ್ಲಿ ಸಕ್ರೀಯಳಾಗಿರುವ ಸಾವಿತ್ರಿಯೊಂದಿಗೆ ಕೊಡಗಿಗೆ ಬಂದಿದ್ದು, ತನಿಖೆಯಿಂದ ಖಾತರಿಗೊಂಡಿದೆಯಂತೆ. ಬಳಿಕ ವರ್ಷದ ಅಂತರದಲ್ಲಿ ಲೋಕಸಭಾ ಚುನಾವಣಾ ಪ್ರಕ್ರಿಯೆ ಬೆನ್ನಲ್ಲೇ; ದಕ್ಷಿಣ ಕೊಡಗಿನ ಬಿರುನಾಣಿ - ಕುಟ್ಟ ವ್ಯಾಪ್ತಿಯ ತೋಟ ಕಾರ್ಮಿಕರ ನಡುವೆ ಕಾಣಿಸಿಕೊಂಡು ಸುದ್ದಿ ಮಾಡಿದ್ದ ಈ ನಕ್ಸಲರು ಕೊಡಗಿನ ನಾಲ್ಕೈದು ಕಡೆಗಳಲ್ಲಿ ಇರುವಿಕೆಯ ಸುಳಿವಿನೊಂದಿಗೆ ಕಣ್ಮರೆಯಾಗಿದ್ದರು.
ಮೂರು ಕಡೆ ಗೋಚರ : ದಕ್ಷಿಣ ಕನ್ನಡ ಹಾಗೂ ಕೊಡಗು ಪೊಲೀಸ್ ನಕ್ಸಲ್ ನಿಗ್ರಹದಳ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಕೇವಲ ಎರಡು ತಿಂಗಳ ಅಂತರದಲ್ಲಿ ಸುಮಾರು 20 ದಿನಗಳ ಕಾಲ ಮಿತಿಯೊಳಗೆ ವಿಕ್ರಂಗೌಡ ತನ್ನ ಸಹಚರರೊಂದಿಗೆ ಮೂರು ಕಡೆಗಳಲ್ಲಿ ಕಾಣಿಸಿಕೊಂಡು ಬಳಿಕ ತಪ್ಪಿಸಿಕೊಂಡಿರುವದು ಬಹಿರಂಗವಾಗಿದೆ.
ಮೊದಲಿಗೆ ಕಳೆದ ಜನವರಿ 14ರಂದು ಶಿರಾಡಿ ಕಾನನ ನಡುವೆ ಗ್ರಾಮವಾಸಿಯೊಬ್ಬರಿಂದ ದವಸಧಾನ್ಯ ದೋಚಿ ಪರಾರಿಯಾದರೆ, ಬಳಿಕ ಫೆ. 2ರಂದು ಕೊಯನಾಡುವಿನ ಕೆ. ಶಂಕಪ್ಪ ಮನೆಯಿಂದ ಆಹಾರ ಪದಾರ್ಥ ದೋಚಿದ್ದ ನಕ್ಸಲರು; ಫೆ. 20ರಂದು ಮತ್ತೆ ನಾಲಡಿಯಲ್ಲಿ ಪೆಮ್ಮಯ್ಯ ಎಂಬವರ ಮನೆಯಿಂದ ನಿತ್ಯೋಪಯೋಗಿ ವಸ್ತುಗಳನ್ನು ಹೊತ್ತೊಯ್ದಿದ್ದರು. ಈ ಮೂರು ಕಡೆ ಸ್ವತಃ ವಿಕ್ರಂಗೌಡ ಮುಂದಾಳತ್ವ ವಹಿಸಿದ್ದು, ಕೇರಳ-ಕೊಡಗಿನ ಗಡಿಭಾಗದ ಕಾನನ ನಡುವೆ ತಲೆಮರೆಸಿಕೊಂಡಿದ್ದಾರೆ.
ಸಂದಿಗ್ಧ ಸ್ಥಿತಿ : ನಕ್ಸಲ್ ವಿಕ್ರಂಗೌಡ ಹಾಗೂ ಇತರರು ಶಸ್ತ್ರಾಸ್ತ್ರ ಹೊಂದಿರುವ ಹಿನ್ನೆಲೆ ಕೋಂಬಿಂಗ್ ನಡೆಸುತ್ತಿರುವ ನಕ್ಸಲ್ ನಿಗ್ರಹ ಪಡೆಯು ಕೂಡ ಜಾಗರೂಕ ಹೆಜ್ಜೆ ಇರಿಸಬೇಕಾದ ಸಂದಿಗ್ಧ ಸ್ಥಿತಿ ಯಲ್ಲಿದ್ದು, ಕಳೆದ 15 ದಿನಗಳಿಂದ ವ್ಯಾಪಕ ಶೋಧದಲ್ಲಿ ತೊಡಗಿರು ವದಾಗಿ ಉನ್ನತ ಮೂಲಗಳು ತಿಳಿಸಿವೆ.
ಅಲ್ಲದೆ ಜಿಲ್ಲೆಯಲ್ಲಿ ಪದೇ ಪದೇ ಆತಂಕ ಸೃಷ್ಟಿಸಲು ಹಾತೊರೆ ಯುತ್ತಿರುವ ನಕ್ಸಲರ ಹೆಡೆಮುರಿ ಕಟ್ಟಲು ರಣತಂತ್ರ ರೂಪಿಸಿರುವ ಕಾರ್ಯಪಡೆ, ಕೊಡಗಿನ ಬ್ರಹ್ಮಗಿರಿ ಶ್ರೇಣಿಯ ಇಡೀ ಅರಣ್ಯವನ್ನು ಜಾಲಾಡುತ್ತಿರುವದಾಗಿ ಮಾಹಿತಿ ಲಭಿಸಿದ್ದು, ಈ ತನಕ ನಾಲಡಿಯಿಂದ ತಲೆಮರೆಸಿಕೊಂಡಿರುವ ಶಸ್ತ್ರಧಾರಿಗಳ ಇರುವಿಕೆ ಗೋಚರಿಸಿಲ್ಲವೆಂದು ಹೇಳಲಾಗುತ್ತದೆ.