ವೀರಾಜಪೇಟೆ, ಮಾ. 16: ವೀರಾಜಪೇಟೆ ಬಳಿಯ ಕುಕ್ಲೂರು ಗ್ರಾಮದಲ್ಲಿರುವ ಮುತ್ತಪ್ಪ ದೇವಾಲಯದಲ್ಲಿ ಎರಡು ದಿನಗಳ ಕಾಲ ಶ್ರೀ ಮುತ್ತಪ್ಪ ದೇವರ (ಕೋಲ) ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮುತ್ತಪ್ಪ ದೇವರ ತೆರೆ ಮಹೋತ್ಸವದ ಪ್ರಯುಕ್ತ ತಾ. 14 ರಂದು ದೇವಾಲಯದಲ್ಲಿ ಶ್ರೀ ಮುತ್ತಪ್ಪ ವೆಳ್ಳಾಟಂನೊಂದಿಗೆ ಪ್ರಾರಂಭಗೊಂಡಿತು. ಶಾಸ್ತಪ್ಪನ್, ಗುಳಿಗನ್ ಹಾಗೂ ಬಸುರಿಮಲ ವೆಳ್ಳಾಟಂ ನಡೆಯಿತು. ತಾ. 15 ರ ಬೆಳಗಿನ ಜಾವ 4 ಗಂಟೆಗೆ ಗುಳಿಗನ ತೆರೆಯೊಂದಿಗೆ ಮುತ್ತಪ್ಪನ್ ಹಾಗೂ ತಿರುವಪ್ಪನ್ ತೆರೆ ನಂತರ ಶಾಸ್ತಪ್ಪನ್, ಕರಿಂಗುಟ್ಟಿ ಶಾಸ್ತಪ್ಪನ ವಿಶೇಷ ತೆರೆಯೊಂದಿಗೆ ಬಸುರಿಮಲ ತೆರೆ ಜರುಗಿತು.

ಎರಡು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಆರ್. ರಾಘವ, ಗೌರವ ಅಧ್ಯಕ್ಷ ಎನ್.ಎನ್. ಶಿವು, ಖಜಾಂಚಿ ಎಂ.ಎಸ್. ಹರೀಶ್, ಸದಸ್ಯರಾದ ವಿ.ವಿ. ಪ್ರವೀಣ್, ವಿವೇಕ್, ಪಿ.ಎ. ಮಂಜುನಾಥ್, ಅರ್ಚಕ ಟಿ.ಆರ್. ಹರ್ಷ, ಇತರರು ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.