ಗೋಣಿಕೊಪ್ಪಲು, ಮಾ. 16: ಬಿ. ಶೆಟ್ಟಿಗೇರಿ ಸಮೀಪದ ಕೂಟಿಯಲ ಸೇತುವೆಗೆ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಭೇಟಿ ನೀಡಿ ವಾಸ್ತವ ಚಿತ್ರಣ ಪಡೆದರು. ಬಾಡಗರಕೇರಿ-ಕೂಟಿಯಲ ಸೇತುವೆ ಮೂಲಕ ಬಿ. ಶೆಟ್ಟಿಗೇರಿ ರಸ್ತೆ ಸಂಪರ್ಕ ಮಾಡುವ ಬಗ್ಗೆ ನಾಗರಿಕರು ಕೇಳಿಕೊಂಡ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅವರು ಈ ಬಗ್ಗೆ ಸಚಿವರೊಂದಿಗೆ ಚರ್ಚಿಸುವದಾಗಿ ಭರವಸೆ ನೀಡಿದರು.

ಕೂಟಿಯಲ ಸೇತುವೆ ಉತ್ತಮ ಗುಣಮಟ್ಟದಲ್ಲಿದ್ದು ಈ ಮೂಲಕ ಬಾಡಗರಕೇರಿಗೆ ರಸ್ತೆ ಸಂಪರ್ಕ ಒದಗಿಸಿದರೆ ಸರಿಸುಮಾರು 22 ಕಿ.ಮೀ ಅಂತರ ಕಡಿಮೆಯಾಗುತ್ತದೆ. ಇದರಿಂದ ವೀರಾಜಪೇಟೆ-ಮಡಿಕೇರಿಗೆ ತೆರಳುವ ಅಂತರ ಕಡಿಮೆಯಾಗುತ್ತದೆ. ಆದರೆ ಅರಣ್ಯ ಇಲಾಖೆ ಈ ಬಗ್ಗೆ ಅಡ್ಡಿಪಡಿಸುತ್ತಿದ್ದು, ಮರಳು, ಮರಗಳು ಈ ರಸ್ತೆಗಳಲ್ಲಿ ಕಳ್ಳಸಾಗಣಿಕೆಯಾಗುತ್ತಿದೆ. ಆದ್ದರಿಂದ ರಸ್ತೆ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆ. ಕೂಟಿಯಲ ಸೇತುವೆಯಿಂದ ಸುಮಾರು 1 ಕಿ.ಮೀ ರಸ್ತೆಯಾದರೆ ಸಮಸ್ಯೆ ದೂರವಾಗುತ್ತದೆ. ಇದರಿಂದ ಕೊಡಗಿನ ಗಡಿ ಭಾಗದ ಗ್ರಾಮಗಳ ಜನರಿಗೆ ಪ್ರಯಾಣದ ಅಂತರ ಕಡಿಮೆಯಾಗುತ್ತದೆ ಎಂದು ಮಾಜಿ ಜಿ.ಪಂ. ಸದಸ್ಯ ಮೂಕಳೇರ ಕುಶಾಲಪ್ಪ ಮಾಹಿತಿ ಒದಗಿಸಿದ್ದಾರೆ.

ಸ್ಥಳದಲ್ಲೇ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಪದ್ಮಿನಿ ಪೊನ್ನಪ್ಪ ಸಮಸ್ಯೆ ಬಗೆಗಿನ ದಾಖಲೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದರು. ಈ ಸಂದರ್ಭ ಆರ್.ಎಂ.ಸಿ. ಸದಸ್ಯೆ ಕಡೇಮಾಡ ಕುಸುಮಾ ಜೋಯಪ್ಪ, ನಾಗರಿಕ ಹೋರಾಟ ಸಮಿತಿಯ ಪ್ರಮುಖರಾದ ಎರ್‍ಮು ಹಾಜಿ, ಪ್ರಸಾದ್, ಎಂ.ಪಿ. ಅಪ್ಪಚ್ಚು ಇದ್ದರು.