ಸೋಮವಾರಪೇಟೆ, ಮಾ. 16: ಸೋಮವಾರಪೇಟೆ ಪಟ್ಟಣದ ಹಲವು ಎಟಿಎಂಗಳಲ್ಲಿ ಕಳೆದ 20 ದಿನಗಳಿಂದ ನಗದು ಅಲಭ್ಯ ವಾಗಿರುವ ಹಿನ್ನೆಲೆ ಸಾರ್ವಜನಿಕರು ಪರದಾಡುತ್ತಿರುವ ಪರಿಸ್ಥಿತಿಯನ್ನು ಮನಗಂಡ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಇಲ್ಲಿನ ಎಸ್‍ಬಿಐ ಶಾಖೆಗೆ ತೆರಳಿ ವ್ಯವಸ್ಥಾಪಕ ರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭ ಬ್ಯಾಂಕ್‍ನಲ್ಲಿದ್ದ ಗ್ರಾಹಕರು ಶಾಸಕರೊಂದಿಗೆ ಮಾತ ನಾಡಿ, ಬ್ಯಾಂಕ್‍ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಆರೋಪಗಳ ಸುರಿಮಳೆ ಗೈದರು. ಎಸ್‍ಬಿಐ ಬ್ಯಾಂಕ್‍ನವರು ಗ್ರಾಹಕ ರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಇದರಿಂದಾಗಿ ಕೆಲವು ಗ್ರಾಹಕರು ತಮ್ಮ ಖಾತೆಗಳನ್ನು ಸ್ಥಗಿತ ಗೊಳಿಸಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭ ಉತ್ತರಿಸಿದ ಬ್ಯಾಂಕ್ ವ್ಯವಸ್ಥಾಪಕರು, ಈಗಾಗಲೇ ಅಗತ್ಯ ಹಣವನ್ನು ಒದಗಿಸುವಂತೆ ಕೋರಿ ರಿಸರ್ವ್ ಬ್ಯಾಂಕ್‍ಗೆ ಪತ್ರ ಬರೆದಿದ್ದೇವೆ. ಆದರೆ, ಇದುವರೆಗೂ ಹಣ ಬಂದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಯವರು ನೋಟು ಅಮಾನ್ಯ ಮಾಡಿದ್ದರಿಂದ ಹಣದ ಸಮಸ್ಯೆ ಎದುರಾಗುತ್ತಿದೆ ಎಂದು ಕೆಲವು ಮಂದಿ ಅಪಪ್ರಚಾರ ಮಾಡುತ್ತಿದ್ದಾರೆ. ಜವಾಬ್ದಾರಿ ಇಲ್ಲದ ಅಧಿಕಾರಿಗಳಿಂದ ಸಾರ್ವಜನಿ ಕರಿಗೂ ಬೇರೆ ಸಂದೇಶ ರವಾನೆ ಯಾಗುತ್ತಿದೆ ಎಂದು ಈ ಸಂದರ್ಭ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಹಣದ ಸಮಸ್ಯೆ ಯನ್ನು ತಕ್ಷಣವೇ ಬಗೆಹರಿಸಬೇಕು. ತಪ್ಪಿದಲ್ಲಿ ಕೇಂದ್ರ ಹಣಕಾಸು ಸಚಿವರಿಗೆ ದೂರು ನೀಡಿ ನಿಮ್ಮ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವದು ಎಂದು ಶಾಸಕ ರಂಜನ್ ಅವರು, ಬ್ಯಾಂಕ್ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಸುಮಾ ಸುದೀಪ್ ಹಾಗೂ ಪಟ್ಟಣದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮನು ಕುಮಾರ್ ರೈ ಉಪಸ್ಥಿತರಿದ್ದರು.

ಸೌಜನ್ಯ ತೋರದ ವ್ಯವಸ್ಥಾಪಕ: ಸಾರ್ವಜನಿಕರ ಸಮಸ್ಯೆ ಹಿನ್ನೆಲೆ ಶಾಸಕ ರಂಜನ್ ಅವರು ಬ್ಯಾಂಕ್‍ಗೆ ಭೇಟಿ ನೀಡಿದ ಸಂದರ್ಭ ವ್ಯವಸ್ಥಾಪಕರು ಕನಿಷ್ಟ ಸೌಜನ್ಯ ವನ್ನೂ ತೋರದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿ ಸಿದರು. ಬ್ಯಾಂಕ್ ವ್ಯವಸ್ಥಾಪಕರು ತೀರಾ ಉಡಾಫೆಯಿಂದ ವರ್ತಿಸಿದ ಹಿನ್ನೆಲೆ ಶಾಸಕರು ಬ್ಯಾಂಕ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಬ್ಯಾಂಕ್‍ಗೆ ಭೇಟಿ ನೀಡಿದ ಸಂದರ್ಭ ವ್ಯವಸ್ಥಾಪಕರ ಬಳಿ ತಮ್ಮ ಪರಿಚಯ ಮಾಡಿ ಕೊಂಡರೂ, ಕನಿಷ್ಟ ಗೌರವ ತೋರಿಸಲಿಲ್ಲ. ವ್ಯವಸ್ಥಾಪಕರ ಕೊಠಡಿಯಲ್ಲಿರುವ ಕುರ್ಚಿಗಳಲ್ಲಿ ಬ್ಯಾಂಕ್ ದಾಖಲೆಗಳನ್ನು ಸಂಗ್ರಹಿಸಿ ಡಲಾಗಿತ್ತು. ಶಾಸಕರೊಂದಿಗೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರಿದ್ದರೂ ಕ್ಯಾರೇ ಎನ್ನಲಿಲ್ಲ. ಈ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ನಂತರ ಆಸನ ಒದಗಿಸಲಾಯಿತು.