ಮಡಿಕೇರಿ, ಮಾ. 15: ಕಾರ್ಮಿಕ ರಂಗ, ಪತ್ರಿಕಾರಂಗ, ರಾಜಕೀಯ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ಮುಖಾಂತರ ವಿಭಿನ್ನ ಚಟುವಟಿಕೆಗಳಲ್ಲಿ ನಾಡಿನ ಜನತೆಯ ಪರಿಚಿತ ನಾಯಕ ಟಿ.ಪಿ. ರಮೇಶ್ ಅವರನ್ನು ಇಂದು ಇಲ್ಲಿನ ಗೌಡ ಸಮಾಜ ವೇದಿಕೆಯಲ್ಲಿ ಪತ್ನಿ ನಿರ್ಮಲಾ ಸಹಿತ ಸನ್ಮಾನದೊಂದಿಗೆ ಅಭಿನಂದಿಸಲಾಯಿತು. ಟಿ.ಪಿ. ರಮೇಶ್ ಅಭಿನಂದನಾ ಸಮಿತಿ ವತಿಯಿಂದ ಮಾಜಿ ಸಚಿವ ಯಂ.ಸಿ. ನಾಣಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡು ರಮೇಶ್ ಅವರನ್ನು ಶ್ಲಾಘಿಸಿದರು.ಈ ಸಂದರ್ಭ ರಮೇಶ್ ಅವರ ಕುರಿತು ಹೊರತರಲಾದ ‘ಸಾಧನೆಯ ಹಾದಿಯಲ್ಲಿ’ ಅಭಿನಂದನಾ ಗ್ರಂಥವನ್ನು ಇತಿಹಾಸ ತಜ್ಞ ಡಾ.ಎಂ.ಜಿ. ನಾಗರಾಜ್ ಬಿಡುಗಡೆ ಗೊಳಿಸಿದರು.
(ಮೊದಲ ಪುಟದಿಂದ) ಗ್ರಂಥಕರ್ತರ ಸಹಿತ 84 ಮಂದಿ ಲೇಖಕರು ರಮೇಶ್ ವ್ಯಕ್ತಿತ್ವ, ಬದುಕಿನ ಹಾದಿ ಬಗ್ಗೆ ಬೆಳಕು ಚೆಲ್ಲಿದ ನಾಗರಾಜ್, ಹಿರಿಯ ರಾಜಕೀಯ ಮುತ್ಸದ್ಧಿ ಯಂ.ಸಿ. ನಾಣಯ್ಯ ಮಾರ್ಗದರ್ಶನದಲ್ಲಿ ಏಳಿಗೆ ಕಂಡುಕೊಂಡಿರುವ ಅಂಶವನ್ನು ಉಲ್ಲೇಖಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು, 1978ರ ದಶಕದಲ್ಲಿ ಟಿ.ಪಿ. ರಮೇಶ್ ಹಾಗೂ ಬಳಗ ಕೊಡಗಿನಲ್ಲಿ ಗೋಕಾಕ್ ಚಳುವಳಿಯ ಧನಿಯಾಗಿದ್ದ ದಿನಗಳನ್ನು ನೆನಪಿಸುತ್ತಾ, ವ್ಯಕ್ತಿಯೊಬ್ಬರು ಶಕ್ತಿಯಾಗಿ ನಾಡು, ನುಡಿಗಾಗಿ ಕೊಡುಗೆ ನೀಡಿರುವದಕ್ಕೆ ಇದೊಂದು ಉದಾಹರಣೆಯೆಂದು ಬೊಟ್ಟು ಮಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಟಿ.ಪಿ. ರಮೇಶ್ ಅವರ ಕನ್ನಡಪರ ಕಳಕಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕೊಡಗಿ ನಂತಹ ನೆಲದಲ್ಲಿ ಕನ್ನಡದ ಧ್ವನಿಯನ್ನು ಗಟ್ಟಿಗೊಳಿಸಿದ ಹೆಗ್ಗಳಿಕೆ ರಮೇಶ್ ಅವರಿಗೆ ಸಲ್ಲುವದಾಗಿ ಸ್ವಾಮೀಜಿ ಮಾರ್ನುಡಿದರು.
ಮಾಸದ ನೆನಪು : ಹಿರಿಯ ಸಾಹಿತಿ ಮಳಲಿ ವಸಂತ್‍ಕುಮಾರ್ ಅವರು ರಮೇಶ್ ಅವರ ಗೋಕಾಕ್ ಚಳುವಳಿಯ ದಿನಗಳನ್ನು ನೆನಪಿಸುತ್ತಾ, ಮಾನವೀಯತೆಯೊಂದಿಗೆ ಇತರರನ್ನು ಪ್ರೀತಿಸುವ ಗುಣ ಅವರದ್ದೆಂದು ಕೊಂಡಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಸದ ನೆನಪು ರಮೇಶ್ ಅವರದ್ದಾಗಿದೆ ಎಂದರು.
ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎಸ್.ಎ. ಜ್ಞಾನೇಶ್ ತನ್ನ ಎಳೆಯ ಜೀವನದಲ್ಲಿ ಟಿ.ಪಿ. ರಮೇಶ್ ಹಾಗೂ ಬಳಗದ ಒಡನಾಟದೊಂದಿಗೆ ಇಂದಿಗೂ ಅನೇಕ ನೆನಪುಗಳು ಸುಳಿದಾಡುತ್ತಿವೆ ಎಂದು ಮೆಲುಕು ಹಾಕಿದರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಅಧ್ಯಕ್ಷೆ ಡಾ. ಕವಿತಾ ರೈ ಆಶಯ ನುಡಿಯೊಂದಿಗೆ ತನ್ನಂತೆ ಅನೇಕರನ್ನು ಬೆಳೆಸಿರುವ ಹೆಗ್ಗಳಿಕೆಯ ವ್ಯಕ್ತಿತ್ವ ರಮೇಶ್ ಅವರದ್ದು ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ. ನೀಲಗಿರಿ ತಳವಾರ್, ಟಿ.ಪಿ. ರಮೇಶ್ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಬಹು ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಮತ್ತು ಹೋರಾಟ ಪ್ರವೃತ್ತಿ ಮೆಚ್ಚತಕ್ಕದ್ದೆಂದು ಪ್ರಶಂಸಿಸಿದರು. ಟಿ.ಪಿ. ರಮೇಶ್ ಕೊಡಗಿನ ಕಾಫಿ, ಏಲಕ್ಕಿ ಇತ್ಯಾದಿ ಬೆಳೆಗಾರರಂತೆ ಕನ್ನಡದ ಬೆಳೆಗಾರ ಎಂಬದಾಗಿ ಅವರು ವ್ಯಾಖ್ಯಾನಿಸಿದರು.
ಮಾಜಿ ಸಚಿವ ಯಂ.ಸಿ. ನಾಣಯ್ಯ ಅಧ್ಯಕ್ಷೀಯ ಭಾಷಣದಲ್ಲಿ ರಮೇಶ್ ಹಾಗೂ ತಮ್ಮ ನಡುವಿನ ನಾಲ್ಕು ದಶಕಗಳ ಒಡನಾಟದೊಂದಿಗೆ ರಾಜಕೀಯ ಏರಿಳಿತಗಳನ್ನು ಮೆಲುಕು ಹಾಕುತ್ತಾ, ಅವರನ್ನು ಇನ್ನಷ್ಟು ಬೆಳೆಸುವಂತೆ ಕರೆ ನೀಡಿದರು. ತನ್ನ ಕಷ್ಟಕರ ಹಾದಿಯ ಜೀವನದೊಂದಿಗೆ ಇಂದು ಸಮಾಜ ಗುರುತಿಸಿ ಸನ್ಮಾನಿಸುವ ಹಂತಕ್ಕೆ ವ್ಯಕ್ತಿತ್ವ ರೂಪಿಸಿದ ಎಲ್ಲರನ್ನು ಸ್ಮರಿಸಿಕೊಂಡ ಟಿ.ಪಿ. ರಮೇಶ್, ಮುಂದೆಯೂ ಸಾಮಾಜಿಕ ರಾಜಕೀಯ ಚಿಂತನೆಯೊಂದಿಗೆ ಜನರಪ ಹೋರಾಟ ಮುಂದುವರಿಸುವದಾಗಿ ಇದೇ ಸಂದರ್ಭ ಘೋಷಿಸಿದರು.
ಅಭಿನಂದನಾ ಸಮಿತಿಯಿಂದ ರಮೇಶ್ ದಂಪತಿಯನ್ನು ಬುದ್ಧನ ಪ್ರತಿಮೆಯೊಂದಿಗೆ ಆತ್ಮೀಯವಾಗಿ ಅಭಿನಂದಿಸುವದರೊಂದಿಗೆ ಹತ್ತಾರು ಸಂಘ ಸಂಸ್ಥೆಗಳು, ಸ್ನೇಹಿತರು ಗೌರವ ಕಾಣಿಕೆಯೊಂದಿಗೆ ಗೌರವಿಸಿದರು. ಸಂಘ ಸಂಸ್ಥೆಗಳ ಪರವಾಗಿ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿದರು. ಗ್ರಂಥಕರ್ತರ ಪರವಾಗಿ ರಮೇಶ್ ಆಪ್ತ ಬಿ.ಎ. ಷಂಶುದ್ದೀನ್ ಹಾಗೂ ಬೆಸೂರು ಮೋಹನ್ ಪಾಳೆಗಾರ್ ಪ್ರಶಂಸನೀಯ ನುಡಿಯಾಡಿದರು. ಅಭಿನಂದನಾ ಸಮಿತಿ ಸಂಚಾಲಕ ಎಂ.ಪಿ. ಕೇಶವಕಾಮತ್ ಸ್ವಾಗತಿಸಿ ದರು. ಸಂಧ್ಯಾ ನವೀನ್ ಪ್ರಾರ್ಥನೆ ಯೊಂದಿಗೆ ಶ್ವೇತಾ ರವೀಂದ್ರ ಹಾಗೂ ಮುನೀರ್ ಅಹಮ್ಮದ್ ನಿರೂಪಿಸಿದರು. ನಗರದ ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಸೇರಿದಂತೆ ಸಮಾಜದ ವಿವಿಧ ರಂಗದ ಅನೇಕರು ಪಾಲ್ಗೊಂಡು ರಮೇಶ್ ದಂಪತಿಯನ್ನು ಹರಸಿದರು. ಮೈಸೂರಿನ ರಾಘವೇಂದ್ರ ಪ್ರಸಾದ್ ಬಳಗ ನಾಡಗೀತೆಯೊಂದಿಗೆ ಭಕ್ತಿ ಗಾಯನ ಹಾಡಿದರು. ಕೆ.ಟಿ. ಬೇಬಿ ಮ್ಯಾಥ್ಯೂ ವಂದಿಸಿದರು.