ಸಿದ್ದಾಪುರ,ಮಾ. 15: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಬಾಡಗ ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಶಾಸಕರು ಹಾಗೂ ಗ್ರಾ.ಪಂ. ಸದಸ್ಯರುಗಳು ಸ್ಪಂದಿಸಿದ್ದಾರೆ. ಈಗಾಗಲೇ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವಾರು ಕಾಮಾಗಾರಿಗಳು ಪ್ರಗತಿಯಲ್ಲಿದೆಯೆಂದು ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ರಾಣಿ ಹಾಗೂ ಸದಸ್ಯರುಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಬಾಡಗ ಗ್ರಾಮದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ನಡೆಸಲು ಸಿದ್ಧತೆ ಕೈಗೊಂಡಿದ್ದು ಸಾಮಗ್ರಿಗಳು ತರಿಸಲಾಗಿದೆಯೆಂದ ಅವರು ರಸ್ತೆ ದುರಸ್ತಿಯನ್ನು ಮುಂದಿಟ್ಟುಕೊಂಡು ಬಾಡಗ ಗ್ರಾಮದ ನಿವಾಸಿಗಳು ಚುನಾವಣೆ ಬಹಿಷ್ಕರಿಸುವ ಅಗತ್ಯವಿಲ್ಲ; ಈ ಭಾಗದ ಸಮಸ್ಯೆಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಗ್ರಾಮ ಪಂಚಾಯಿತಿ ಸ್ಪಂದಿಸಿರುವದಾಗಿ ತಿಳಿಸಿದರು.
ಗ್ರಾ.ಪಂ. ಸದಸ್ಯರಾದ ಅಜ್ಜೀನಿಕಂಡ ರಘು ಕರುಂಬಯ್ಯ ಮಾತನಾಡಿ ಶಾಸಕ ಬೋಪಯ್ಯನವರ ಅನುದಾನದಿಂದ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. 35 ಲಕ್ಷಕ್ಕೂ ಅಧಿಕ ಮೊತ್ತದ ಕಾಮಾಗಾರಿಗಳು ನಡೆದಿವೆ. ಮೈಲಾತ್ಪುರದಿಂದ ಬಾಡಗ ಗ್ರಾಮದ ಮಸೀದಿವರೆಗೆ ಇರುವ ರಸ್ತೆಯ ದುರಸ್ತಿ ಕಾಮಾಗಾರಿ ಪ್ರಗತಿಯಲ್ಲಿದೆಯೆಂದರು. ಮಾಲ್ದಾರೆ ಗ್ರಾ.ಪಂ. ವತಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳಿರುವ ಭಾಗದಲ್ಲಿ ಹಂತ ಹಂತವಾಗಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಸಮಸ್ಯೆಗಳಿಗೆ ಗ್ರಾ.ಪಂ. ಆದ್ಯತೆ ನೀಡಿ ಸಮಸ್ಯೆಗೆ ಸ್ಪಂದಿಸಲಾಗುವದೆಂದರು. ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿದು ಪಂಚಾಯಿತಿಯೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜು, ಸದಸ್ಯರುಗಳಾದ ಸತೀಶ್, ವಾರಿಜಾ, ಪದ್ಮಾ, ಪಾರ್ವತಿ, ಪವಿತ್ರ, ಹೇಮಾವತಿ, ರುದ್ರಪ್ಪ, ಗ್ರಾಮಸ್ಥರು ಹಾಜರಿದ್ದರು.