ಮಡಿಕೇರಿ, ಮಾ. 15: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಟ್ವೀಟ್‍ವೊಂದು ಜಿಲ್ಲೆಯಲ್ಲಿ ಕುತೂಹಲ ಮೂಡಿಸಿತ್ತು.‘‘ನನ್ನ ಕ್ಷೇತ್ರದ ಮತ್ತು ಜಿಲ್ಲೆಯ ಎಲ್ಲಾ ಪ್ರೀತಿಯ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಹಿತೈಷಿಗಳಿಗೆ ನಾಳೆ ದಿನ ಸಂತಸದ ಆಶ್ಚರ್ಯವೊಂದನ್ನು ಹಂಚಿಕೊಳ್ಳುತ್ತೇನೆ. ಕಾಲೂರುವಿನಿಂದ ವಿಧಾನ ಸೌಧದವರೆಗೆ ಬದಲಾವಣೆಯ ಪ್ರಯಾಣ ನನ್ನದಾಯಿತು; ಸರಳ, ನೇರ ಪ್ರವೃತ್ತಿಯ ಕಾರ್ಯಕರ್ತನಾಗಿದ್ದ, ಕೌಟುಂಬಿಕ ಅಥವಾ ಆರ್ಥಿಕ ಬೆಂಬಲವಿಲ್ಲದಿದ್ದ ನನ್ನನ್ನು ಜನರು ಸ್ವೀಕರಿಸಿರುವದನ್ನು ಕ್ಷೇತ್ರದ ಜನರು ತಿಳಿದುಕೊಳ್ಳಬೇಕಾಗಿದೆ. ಬೋಪಯ್ಯಕೆ.ಜಿ. ಬೋಪಯ್ಯಣ್ಣನಾದದ್ದು ಹೇಗೆ? ಎಂಬದು ಗಮನಾರ್ಹ’’ಬೋಪಯ್ಯ ಅವರ ಈ ಮೇಲಿನ ಟ್ವೀಟ್‍ನ ಬಗ್ಗೆ ‘ಶಕ್ತಿ’ ಬೆಂಗಳೂರಿನಲ್ಲಿದ್ದ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ,
(ಮೊದಲ ಪುಟದಿಂದ) ‘‘ನನ್ನ ಜನರ ಬಳಿ ಮುಕ್ತ ಅಭಿಪ್ರಾಯ ಹಂಚಿಕೊಂಡಿದ್ದೇನೆಯೇ ಹೊರತು, ಬೇರೆ ಯಾವ ರಾಜಕೀಯ ಬದಲಾವಣೆ ಅಥವಾ ನಿಲುವಿನಲ್ಲಿ ಗೊಂದಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸೂಕ್ಷ್ಮ ಪರಿಸರ ತಾಣ
ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸರ ತಾಣ ಜಾರಿಗೊಳಿಸುವದನ್ನು ಯಥಾವತ್ತಾಗಿ ಮುಂದುವರಿಸುವಂತೆ ಕೆಲವು ಪರಿಸರವಾದಿಗಳು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಮನವಿ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಸೂಕ್ಷ್ಮ ಪರಿಸರ ತಾಣವನ್ನು ಕೇಂದ್ರ ಘೋಷಿಸಿದ್ದರೂ ಅದನ್ನು ಜಾರಿಗೊಳಿಸುವದು ರಾಜ್ಯ ಸರಕಾರ, ವನ್ಯಜೀವಿ ಪ್ರಮುಖರು, ಪ್ರಾದೇಶಿಕ ಅಧಿಕಾರಿ, ಶಾಸಕರು ಸಮಿತಿಯಲ್ಲಿ ಇರುತ್ತಾರೆ. ಆ ಸಂದರ್ಭ ಜನಾಭಿಪ್ರಾಯಕ್ಕೆ ಮನ್ನಣೆ ನೀಡುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ಸೂಕ್ಷ್ಮ ಪರಿಸರ ತಾಣದ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆದಿದೆ. ಕೊಡಗಿನ ಜನಜೀವನಕ್ಕೆ ಧಕ್ಕೆಯಾಗುವಂತೆ ಯಾರಾದರೂ ಸರಕಾರದ ಮೇಲೆ ಒತ್ತಡ ಹೇರಿದರೆ, ಅಂತಹವರ ನಿಲುವಿನ ವಿರುದ್ಧ ಜನರೇ ಪ್ರತಿಭಟಿಸುತ್ತಾರೆಂದು ಬೋಪಯ್ಯ ಸ್ಪಷ್ಟಪಡಿಸಿದರು.