ವೀರಾಜಪೇಟೆ, ಮಾ. 14: ಗ್ರಾಮ ಪಂಚಾಯಿತಿ ಕಚೇರಿಗೆ ವ್ಯವಸ್ಥಿತವಾಗಿ ಸೌಲಭ್ಯಗಳಿಂದ ಕೂಡಿದ ವಿಶಾಲವಾದ ಕಟ್ಟಡವಿದ್ದರೆ ಪಂಚಾಯಿತಿಯ ಕಾರ್ಯವೈಖರಿಗೆ ಅನುಕೂಲವಾಗುತ್ತದೆ. ಇದರಿಂದ ಸಾರ್ವಜನಿಕರ ಅರ್ಜಿಗಳು ವಿಳಂಬವಿಲ್ಲದೆ ವಿಲೇವಾರಿಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ಬೇಟೋಳಿ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡಕ್ಕಾಗಿ ಬೇಟೋಳಿ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಹೇಶ್ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೂ 18.50 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವದು. ನಂತರ ಬರುವ ಅನುದಾನದಲ್ಲಿ ಖಾಲಿ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ ಪಂಚಾಯಿತಿಯ ಆದಾಯವನ್ನು ಕ್ರೋಡಿಕರಿಸಲಾಗುವದು ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ. ಚೋಂದಮ್ಮ, ಉಪಾಧ್ಯಕ್ಷ ಅಮ್ಮಣಕುಟ್ಟಂಡ ಸುರೇನ್ ಕಟ್ಟಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಬಿ.ಎಂ. ಗಣೇಶ್, ಪಂಚಾಯಿತಿ ಸದಸ್ಯರುಗಳಾದ ಲಾವಣ್ಯ, ಎ.ಎಂ. ಬೋಪಣ್ಣ, ಎ.ಎಂ. ಸರಸ್ವತಿ, ಲೀಲಾವತಿ, ಉಮ್ಮರ್ ಫಾರೂಖ್, ಎ.ಎಂ. ಬೋಪಣ್ಣ, ಬಿ.ಸಿ. ನಾರಾಯಣ್ ಹಾಗೂ ಮನು ರಾಮಚಂದ್ರ, ಎ.ಎಂ. ಹರೀಶ್, ಪಟ್ಟಡ ಬೋಪಣ್ಣ ಮತ್ತಿತರರು ಇದ್ದರು.
ಬೇಟೋಳಿ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಡ ಕುಟುಂಬಸ್ಥರು ಐದು ಸೆಂಟು ಜಾಗವನ್ನು ಉದಾರವಾಗಿ ನೀಡಿದನ್ನು ಸಭೆಯಲ್ಲಿ ಸ್ಮರಿಸಲಾಯಿತು.