ಸೋಮವಾರಪೇಟೆ, ಮಾ. 14: ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಿತರಿಸಲಾಗಿರುವ ಅಗ್ನಿ ಸುರಕ್ಷತಾ ಧಿರಿಸು ಕಳಪೆ ಗುಣಮಟ್ಟದಿಂದ ಕೂಡಿದ್ದು, ತಕ್ಷಣ ಬದಲಾಯಿಸಿ ಗುಣಮಟ್ಟದ ವಸ್ತ್ರ ಒದಗಿಸಬೇಕೆಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಶಾಲೆಯಿಂದ ರೂ. 2,100 ಪಡೆದು ತೀರಾ ಕಳಪೆ ಗುಣಮಟ್ಟದ ಧಿರಿಸನ್ನು ನೀಡಿದ್ದಾರೆ. ತಕ್ಷಣವೇ ಸಂಬಂಧಿಸಿದ ಸಂಸ್ಥೆಯವರು ಉತ್ತಮ ಗುಣಮಟ್ಟದ ಧಿರಿಸನ್ನು ವಿತರಿಸಬೇಕು. ತಪ್ಪಿದಲ್ಲಿ ಹಣ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಯೋಜನೆಯಡಿ ವಿತರಿಸುತ್ತಿರುವ ಪರಿಕರಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಿನ ಬೆಲೆ ಪಡೆದು ನೀಡಲಾಗುತ್ತಿದೆ ಎಂದು ಆರೋಪಿಸಿದ ಶಿಕ್ಷಕರ ಸಂಘದ ವಲಯಾಧ್ಯಕ್ಷ ಸಿ.ಕೆ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಎಲ್ಲ ಶಾಲೆಗಳು ಕಡ್ಡಾಯವಾಗಿ ಖರೀದಿಸಬೇಕೆಂದು ಆದೇಶ ಮಾಡಿರುವದು ಸರಿಯಲ್ಲ. ರೂ. 2100 ನಿಗದಿಗೊಳಿಸಿ ಕಳಪೆ ಗುಣಮಟ್ಟದ ಧಿರಿಸು ನೀಡುತ್ತಿರುವದು ಶಾಲೆಗಳಿಗೆ ಹೊರೆಯಾಗಿದೆ ಎಂದರು.
ತಕ್ಷಣ ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಬೇಕು. ತಪ್ಪಿದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗಳನ್ನು ಒಟ್ಟುಗೂಡಿಸಿ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಯೋಗೇಶ್, ಸಹ ಕಾರ್ಯದರ್ಶಿ ಹೆಚ್.ಎಸ್. ರಾಜಪ್ಪ, ನಿರ್ದೇಶಕ ಆನಂದ ಉಪಸ್ಥಿತರಿದ್ದರು.