ಮಡಿಕೇರಿ, ಮಾ. 14: ಕೊಡಗು ಜಿಲ್ಲೆಯಾದ್ಯಂತ ಈತನಕ ಮಳೆಯಾಗದ ಪರಿಸ್ಥಿತಿಯಿಂದಾಗಿ ಜನತೆ ಆತಂಕಕ್ಕೀಡಾಗಿದ್ದರು. ಬಿಸಿಲಿನ ಧಗೆ, ಬೆಂಕಿಯ ಬೇಗುದಿಯ ನಡುವೆ ಭವಿಷ್ಯದ ಚಿಂತನೆಯಲ್ಲಿ ದಿನದೂಡುತ್ತಿದ್ದ ಸಂದರ್ಭದಲ್ಲಿ ನಿನ್ನೆ (ಮಾ.13) ದಿನ ಸಂಜೆ ಜಿಲ್ಲೆಯ ವಿವಿಧೆಡೆಗಳಲ್ಲಿ ಆಶಾದಾಯಕವಾದ ಮಳೆ ಸುರಿದಿದ್ದು, ಇಳೆಯನ್ನು ತಂಪಾಗಿಸಿದೆ. ಜಿಲ್ಲೆಯಾದ್ಯಂತ ಬಿಸಿಲಿನ ತಾಪಮಾನ ಏರುತ್ತಿದ್ದುದು ಇನ್ನುಳಿದ ಬೇಸಿಗೆಯ ಅವಧಿಯನ್ನು ಹೇಗೆ ಕಳೆಯುವದು ಎಂಬ ಚಿಂತೆ ಜನತೆಯನ್ನು ಕಾಡುತ್ತಿತ್ತು. ಅಲ್ಲದೆ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಹೂಮಳೆ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದೆ, ಮುಂದಿನ ಫಸಲಿನ ಕುರಿತು ಆತಂಕ ರೈತಾಪಿ ವರ್ಗವನ್ನು ಕಂಗೆಡಿಸಿತ್ತು. ಈ ಬೆನ್ನಲ್ಲೇ ನಿನ್ನೆ ಸಂಜೆ ಹಾಗೂ ರಾತ್ರಿ ಜಿಲ್ಲೆಯ ವಿವಿಧೆಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಅಲ್ಲವಾದರೂ ಸಾಧಾರಣ ಮಟ್ಟದಲ್ಲಿ ಸುರಿದ ಮಳೆ ಇಳೆಯನ್ನು ಒಂದಷ್ಟು ತಂಪಾಗಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ ಸಂಜೆಯಾಗುತ್ತಿದ್ದಂತೆ ಮೋಡದ ವಾತಾವರಣದೊಂದಿಗೆ ಕತ್ತಲು ಆವರಿಸಿ ಇನ್ನೇನು ಮಳೆ ಸುರಿದೇಬಿಟ್ಟಿತು ಎಂಬಂತಹ ವಾತಾವರಣ ಸೃಷ್ಟಿಯಾಯಿತಾದರೂ ಕೇವಲ ಒಂದೆರಡು ಹನಿಯ ಸಿಂಚನದೊಂದಿಗೆ ವಾತಾವರಣ ಬದಲಾಯಿತು.

(ಮೊದಲ ಪುಟದಿಂದ) ಆದರೆ ಜಿಲ್ಲೆಯ ಇತರೆಡೆಗಳಲ್ಲಿ ಅರ್ಧ ಇಂಚಿಗಿಂತಲೂ ಅಧಿಕ ಮಳೆಯಾಗಿರುವ ಕುರಿತು ವರದಿಯಾಗಿದೆ. ಹಲವಾರು ವಿಭಾಗಕ್ಕೆ ಈ ವರ್ಷದ ಪ್ರಥಮ ಮಳೆಯಾಗಿರುವದು ಜನರಲ್ಲಿ ಸಂತಸ ಮೂಡಿಸಿದೆ. ಮಾರ್ಚ್ 14ರಂದು ಅಲ್ಲಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಇನ್ನೂ ಒಂದೆರಡು ದಿನಗಳಕಾಲ ಜಿಲ್ಲೆಯಲ್ಲಿ ಸಾಧಾರಣದಿಂದ ಹಗುರವಾದ ಮಳೆಯಾಗುವ ಸಾಧ್ಯತೆ ಇರುವದಾಗಿ ರಾಜ್ಯ ಹವಾಮಾನ ಇಲಾಖೆಯ ಮುನ್ಸೂಚನೆಗಳು ತಿಳಿಸಿವೆ.

ಕುಶಾಲನಗರ

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬುಧವಾರ ಮೋಡ ಕವಿದ ವಾತಾವರಣದೊಂದಿಗೆ ಸಂಜೆ ವೇಳೆ ತುಂತುರು ಮಳೆಯಾಗಿದೆ. ಮಧ್ಯಾಹ್ನದಿಂದಲೇ ಬಿಸಿಲಿನ ತೀವ್ರತೆ ಕಡಿಮೆಯಾಗಿ ದಟ್ಟ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ 4 ಗಂಟೆ ವೇಳೆಗೆ ಕೆಲ ನಿಮಿಷ ಸಾಧಾರಣ ಮಳೆಯಾಗುವ ಮೂಲಕ ತಂಪು ವಾತಾವರಣ ಗೋಚರಿಸಿತು. ರಾತ್ರಿ 8 ಗಂಟೆಗೆ ಉತ್ತಮ ಮಳೆ ಸುರಿಯಿತು.

ಭಾಗಮಂಡಲ: ಇಂದು ಭಾಗಮಂಡಲದಲ್ಲಿ ತುಂತುರು ಮಳೆ ಬಂದಿದ್ದು, ನಿನ್ನೆ ದಿನ ಕೂಡ ಮಳೆ ಬಂದಿದೆ. ಒಟ್ಟು 13 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ 2017ರಲ್ಲಿ ಇದೇ ಅವಧಿಗೆ ಭಾಗಮಂಡಲಕ್ಕೆ 50.6 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ

ನಿನ್ನೆ ಸಂಜೆ ಮತ್ತು ಇಂದು ಮಧ್ಯಾಹ್ನದ ನಂತರ ಸೋಮವಾರಪೇಟೆ ಭಾಗಕ್ಕೆ ತುಂತುರು ಮಳೆಯಾಯಿತು. ಬಿಸಿಲಿನ ಬೇಗೆಯಿಂದ ಭೂಮಿ ಕೊಂಚ ತಂಪಾಯಿತು.

ನಿನ್ನೆ ಸಂಜೆ ದಟ್ಟ ಮೋಡ ಕವಿದಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ಇದ್ದರೂ ತುಂತುರು ಮಳೆ ಸುರಿದು ಮೋಡ ಕರಗಿತು. ತಾಕೇರಿ ಭಾಗಕ್ಕೆ ಉತ್ತಮ ಮಳೆಯಾಗಿದ್ದರೆ, ಬೇಳೂರು, ಹಾನಗಲ್ಲು, ಶಾಂತಳ್ಳಿ, ಗೌಡಳ್ಳಿ, ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹನಿಗಳ ಸಿಂಚನವಾಯಿತು.

ಈ ಭಾಗದಲ್ಲಿ ಕರಿಮೆಣಸು ಕೊಯ್ಲು ಕಾರ್ಯ ಭರದಿಂದ ಸಾಗಿದ್ದು, ತುಂತುರು ಮಳೆಯಾದ ಹಿನ್ನೆಲೆ ಕರಿಮೆಣಸನ್ನು ಒಣಗಿಸಲು ಎರಡು ದಿನಗಳ ಕಾಲ ಹಿನ್ನಡೆಯಾಯಿತು.