ಸಿದ್ದಾಪುರ, ಮಾ. 14: ಕೇಬಲ್ ಅಳವಡಿಸಲೆಂದು ಉತ್ತಮ ಸ್ಥಿತಿಯಲ್ಲಿದ್ದ ಡಾಂಬರಿಕರಣಗೊಂಡ ರಸ್ತೆಯ ಮಧೆÉ್ಯ ಗುಂಡಿ ತೋಡಿರುವ ಘಟನೆ ನಡೆದಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಜೆಸಿಬಿ ಯಂತ್ರವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿ, ಕೆಲಸದ ಉಸ್ತುವಾರಿಯನ್ನು ವಹಿಸಿದ ವ್ಯಕ್ತಿಯನ್ನು ತರಾಟೆಗೆ ತೆಗೆದ ಘಟನೆ ಇಂದು ಸಂಜೆ ನೆಲ್ಯಹುದಿಕೇರಿಯ ಬೆಟ್ಟದ ಕಾಡು ಶ್ರೀ ಸತ್ಯನಾರಾಯಣ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.
ನೆಲ್ಯಹುದಿಕೇರಿಯಿಂದ ಸತ್ಯನಾರಾಯಣ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಖಾಸಗಿ ಮಾಲೀಕತ್ವದ ಮೊಬೈಲ್ ಸಂಸ್ಥೆಗೆ ಸೇರಿದ ಕೇಬಲ್ ಅಳವಡಿಸಲು ಜೆಸಿಬಿ ಮೂಲಕ ಚರಂಡಿ ತೋಡುತ್ತಿದ್ದ ಸಂದರ್ಭ ಸ್ಥಳಕ್ಕೆ ತೆರಳಿ ಗಮನಿಸಿದ ಗ್ರಾಮಸ್ಥರು, ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯ ಮಧ್ಯ ಭಾಗದಲ್ಲಿ ಗುಂಡಿತೋಡಿರುವದು ಕಂಡು ಬಂತು. ಈ ಸಂದರ್ಭ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿ ಜೆಸಿಬಿ ವಾಹನವನ್ನು ತಡೆದು ಕೆಲಸದ ಉಸ್ತುವಾರಿ ವಹಿಸಿದವರನ್ನು ತರಾಟೆಗೆ ತೆಗೆದುಕೊಂಡರು. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಇದೀಗ ಸತ್ಯ ನಾರಾಯಣ ದೇವಸ್ಥಾನದ ವಾರ್ಷಿಕ ಉತ್ಸವ ಪ್ರಾರಂಭವಾಗಿದ್ದು, ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಹಾನಿಗೊಳಿಸಿದ್ದನ್ನು ಗ್ರಾಮಸ್ಥರು ಖಂಡಿಸಿದರು. ಕಾಮಗಾರಿಗೆ ಅನುಮತಿ ನೀಡಿದ ಪಿಡಿಓ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ರಸ್ತೆ ದುರಸ್ಥಿಪಡಿಸುವವರೆಗೂ ಜೆಸಿಬಿ ವಾಹನವನ್ನು ಬಿಡುವದಿಲ್ಲ, ಕೂಡಲೇ ಜನಪ್ರತಿನಿದಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ಪ್ರಸಂಗವೂ ಎದುರಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣವಿರುವ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.