ಗೋಣಿಕೊಪ್ಪ ವರದಿ: ಕಾವೇರಿ ಕಾಲೇಜು 50 ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ತಾ. 20 ರಂದು ಕಾವೇರಿ ಫೆಸ್ಟ್ 2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಅಜ್ಜಿನಿಕಂಡ ಸಿ. ಗಣಪತಿ ಪಾಲ್ಗೊಳ್ಳಲಿದ್ದಾರೆ. ಕಾಲೇಜಿನಿಂದ ಪದವಿ ಪಡೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರಗತಿಪರ ಕೃಷಿಕ ಜಮ್ಮಡ ಎಂ. ಪೂವಣ್ಣ, ಸಾಮಾಜಿಕ ಕಾರ್ಯಕರ್ತ ಐಚೆಟ್ಟೀರ ರವಿ ಸೋಮಯ್ಯ, ಅಂತಾರ್ರಾಷ್ಟ್ರೀಯ ಹಾಕಿ ಪಟು ಪಟ್ಟಡ ಜಮುನ, ಲಯನ್ಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಕೆ.ಸಿ. ಪವಿತ್ರ, ಕಾಲೇಜಿನ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಹೆಚ್.ಕೆ. ಚೆಲುವ, ಹಳೆ ವಿದ್ಯಾರ್ಥಿ ಸಂಘದ ಸಂಚಾಲಕಿ ಎಸ್.ಎಂ. ರಜನಿ ಅವರನ್ನು ಸನ್ಮಾನಿಸಲಾಗುವದು.

ಈ ಸಂದರ್ಭ ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಡ್ಡಂಡ ಕಾರ್ಯಪ್ಪ ಹಾಗೂ ತಂಡದವರಿಂದ ಹರದಾಸ ಅಪ್ಪಚ್ಚು ಕವಿ ಅವರ ‘ಅಮರಕಾವ್ಯ’ ಎಂಬ ನಾಟಕವನ್ನು ಏರ್ಪಡಿಸಲಾಗಿದೆ.

ನಿರ್ದೇಶಕ ಕೊಳ್ಳಿಮಾಡ ಅಜಿತ್ ಮಾತನಾಡಿ, 1968 ಸ್ಥಾಪನೆಗೊಂಡ ಈ ಕಾಲೇಜಿನಿಂದ ಅಂದಾಜು 10,000 ವಿದ್ಯಾರ್ಥಿಗಳು ವ್ಯಾಸಾಂಗ ಪಡೆದಿದ್ದಾರೆ. ಇದರ ಜ್ಞಾಪಕಾರ್ಥವಾಗಿ ಹಳೆ ವಿದ್ಯಾರ್ಥಿಗಳು ಕಾಲೇಜಿಗೆ ಅಂದಾಜು ರೂ. 1 ಕೋಟಿ ವೆಚ್ಚದಲ್ಲಿ ಆಡಳಿತ ವಿಭಾಗ ಕಟ್ಟಲು ಉತ್ಸುಕರಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಕಾಲೇಜಿನಿಂದ ಶಿಕ್ಷಣ ಪಡೆದ ಹಲವು ವಿದ್ಯಾರ್ಥಿಗಳು ಇದರ ಸದಸ್ಯತ್ವ ಪಡೆದಿಲ್ಲ. ಆದ್ದರಿಂದ ಅಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಹಳೆ ವಿದ್ಯಾರ್ಥಿಗಳು ಸದಸ್ಯತ್ವ ಪಡೆದು ಕಾಲೇಜಿನ ಏಳಿಗೆಗಾಗಿ ಮುಂದಾಗಬೇಕೆಂದು ಕರೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ 9480605573, 9448047373 ಸಂರ್ಪಕಿಸುವಂತೆ ತಿಳಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಟಿ.ಎಂ. ದೇವಯ್ಯ, ಖಜಾಂಚಿ ಮನು ನಂಜಪ್ಪ, ನಿರ್ದೇಶಕರುಗಳಾದ ನಟೇಶ್, ಕಿಶೋರ್ ಬೋಪಯ್ಯ, ಎಸ್.ಎಂ. ರಜನಿ, ಪೂಣಚ್ಚ, ಜಮ್ಮಡ ಶಂಬು, ಜೋಯಪ್ಪ ಉಪಸ್ಥಿತರಿದ್ದರು.