ಗೋಣಿಕೊಪ್ಪಲು, ಮಾ. 14: ಬೆಳಕಿನ ಭಾಗ್ಯ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದ್ದು. ಹೊಗೆ ಮುಕ್ತ ಕೊಡಗು, ಸೌದೆ ರಹಿತ ಅಡುಗೆ 2ನೇ ಹಂತದ ಕಾರ್ಯಕ್ರಮವನ್ನು ಅಡುಗೆ ಅನಿಲ ರಹಿತ ಕುಟುಂಬಗಳಿಗೆ ತಲಪಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು. ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ವತಿಯಿಂದ ನಾಪೋಕ್ಲು ಬ್ಲಾಕ್ನ 19 ವಲಯಗಳಿಗೆ 235 ಕುಟುಂಬಗಳಿಗೆ ಉಚಿತ ಗ್ಯಾಸ್ ಕಿಟ್ಗಳನ್ನು ಚೇರಾಂಬಾಣೆ ಕೊಡವ ಸಮಾಜದಲ್ಲಿ ವಿತರಿಸಿ ಅವರು ಮಾತನಾಡಿದರು. ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಅಭಿವೃದ್ಧಿ ಕಾರ್ಯವನ್ನು ಪಕ್ಷಾತೀತವಾಗಿ ಮಾಡಿದ್ದು, ಅರಣ್ಯ ನಿಗಮದಿಂದ ಜಿಲ್ಲೆಯ ಜನತೆಯ ಒಳಿತಿಗೆ ಈ ರೀತಿ ಕಾರ್ಯಕ್ರಮ ಆಯೋಜಿಸಿರುವದು ಶ್ಲಾಘನೀಯ ಎಂದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹ್ಯಾರೀಸ್, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಮಹಿಳಾ ಘಟಕದ ಅಧ್ಯಕ್ಷ ಅಮೀನಾ, ಕಾಂಗ್ರೆಸ್ ಮುಖಂಡರಾದ ಮಣಿ ಅಯ್ಯಪ್ಪ, ಬಿದ್ದಂಡ ಸುಮಿತಾ ಮಾದಪ್ಪ, ಶೋಭಾ, ಬಷೀರ್, ಪಂಚಾಯತ್ ರಾಜ್ ಜಿಲ್ಲಾ ಸಂಯೋಜಕ ಮೈನಾ, ರಾಜ್ಯ ಸಂಯೋಜಕಿ ಸುರಯ್ಯ ಅಬ್ರಾರ್ ಸೇರಿದಂತೆ ವಲಯಾಧ್ಯಕ್ಷರು ಪಾಲ್ಗೊಂಡಿದ್ದರು.