ಚಿತ್ರ ವರದಿ: ವಾಸು

ಸಿದ್ದಾಪುರ, ಮಾ. 9: ಕಳೆದೆರಡು ದಿನಗಳ ಹಿಂದೆ ಹುಲಿ ಧಾಳಿಗೆ ಸಿಲುಕಿ ಮೃತಪಟ್ಟ ಹಸುವಿನ ಮಾಲೀಕ ದಂಪತಿಗಳು ಇದೀಗ ಕಂಗಾಲಾಗಿದ್ದಾರೆ.

ವ್ಯಾಘ್ರನ ಧಾಳಿಗೆ ಸಿಲುಕಿ ಹಾಲು ಕರೆಯುವ ಹಸುವನ್ನು ಕಳೆದುಕೊಂಡ ಮಾಲ್ದಾರೆ ಗ್ರಾಮದ ಚೊಟ್ಟೆಪಾಳಿ ನಿವಾಸಿ ಶಂಕರಕುಟ್ಟಿ ಮನೆಗೆ ‘ಶಕ್ತಿ’ ಭೇಟಿ ನೀಡಿದ ಸಂದರ್ಭ 70 ವರ್ಷ ಪ್ರಾಯದ ಶಂಕರಕುಟ್ಟಿ ಹುಲಿಯ ಭಯದಿಂದ ಮನೆಯಿಂದ ಹೊರಗಡೆ ಬರಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಅಳಲು ತೋಡಿಕೊಂಡರು. ಅನಾರೋಗ್ಯ ದಿಂದ ಬಳಲುತ್ತಿರುವ ತಾನು ತನ್ನ ಹಾಗೂ ಸಂಸಾರದ ಹೊಟ್ಟೆಪಾಡಿಗಾಗಿ ಜಾನುವಾರಗಳನ್ನು ಸಾಕಿ ಅದರ ಹಾಲನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ ಎಂದರು. ಕಳೆದ ಸುಮಾರು ವರ್ಷಗಳಿಂದ ಜಾನುವಾರಗಳನ್ನು ಸಾಕುತ್ತಿರುವದಾಗಿ ತಿಳಿಸಿದರು. ಶಂಕರಕುಟ್ಟಿ ಪತ್ನಿ 60 ವರ್ಷ ಪ್ರಾಯದ ರುಕ್ಮಿಣಿ ಮಾತನಾಡಿ ಕಷ್ಟ ಪಟ್ಟು ಕಾಡಿನಿಂದ ಹಸಿ ಹುಲ್ಲು ತಂದು ಜಾನುವಾರುಗಳನ್ನು ಸಾಕುತ್ತಿದ್ದೇವೆ. ದಿನಕ್ಕೆ 10 ಲೀಟರ್‍ನಷ್ಟು ಹಾಲು ಕೊಡುವ ಹಸು ಮೇಯಲು ತೆರಳಿದ ಸಂದರ್ಭ ಹುಲಿ ಧಾಳಿ ನಡೆಸಿ ಸಾಯಿಸಿದೆ ಹಸುವನ್ನು ಅವಲಂಭಿಸಿಕೊಂಡು ಹಾಲು ಮಾರಾಟ ಮಾಡಿ ಜೀವನ ನಡೆಸುತ್ತಿರುವ ಸಂದರ್ಭ ರೂ. 70 ಸಾವಿರ ಮೌಲ್ಯದ ಹಸುವನ್ನು ಕಳೆದು ಕೊಂಡಿರುವದಾಗಿ ದುಃಖಿಸಿದರು.

ಅರಣ್ಯ ಇಲಾಖೆ ಕೂಡಲೇ ಹುಲಿಯನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದರು. ಕಳೆದ ಕೆಲವು ತಿಂಗಳಿನಿಂದ ಮಾಲ್ದಾರೆ, ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹುಲಿಯು ಜಾನುವಾರಗಳ ಮೇಲೆ ಧಾಳಿ ನಡೆಸಿ ಸಾಯಿಸುವ ಮೂಲಕ ಅಟ್ಟಹಾಸ ಮೆರೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತಗಳು ಆಗುವ ಮುನ್ನ ಅರಣ್ಯ ಇಲಾಖೆಯ ಮೇಲಾಧಿ ಕಾರಿಗಳು ಹುಲಿಯನ್ನು ಸೆರೆಹಿಡಿ ಯಬೇಕೆಂದು ಒತ್ತಾಯಿಸಿದ್ದಾರೆ.