ವೀರಾಜಪೇಟೆ, ಮಾ. 9: ದೇವಾಲಯವೆಂದರೆ ದೇವನ ಆಲಯ. ಭಯ ಭಕ್ತಿಗೆ ಪ್ರಾಮುಖ್ಯತೆ ನೀಡುವದು ಬಿಟ್ಟು ರಾಜರೋಷವಾಗಿ ಮದ್ಯ ಮಾರಾಟ ಮಾಡುತ್ತಿರುವದು ಧರ್ಮಕ್ಕೆ ಮತ್ತು ಸಂಸ್ಕøತಿಗೆ ವಿರೋಧ. ಮದ್ಯ ಮಾರಾಟದಿಂದ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ವಿಷಯ. ಬೇಲಿಯೇ ಎದ್ದು ಹೊಲ ಮೇಯುವಂತಹ ಪ್ರಕರಣವಿದು. ಇದು ನಡೆಯುತ್ತಿರುವದು ಬೇರೆ ಎಲ್ಲೂ ಅಲ್ಲ ವೀರಾಜಪೇಟೆ ತಾಲೂಕಿನ ರಾಜ್ಯ ಗಡಿಭಾಗವಾದ ಮಾಕುಟ್ಟ ಗ್ರಾಮದ ದೇವಸ್ಥಾನದ ಅವರಣದಲ್ಲಿ. ವೀರಾಜಪೇಟೆ ತಾಲೂಕಿವಿನ ರಾಜ್ಯ ಗಡಿ ಭಾಗ ಮತ್ತು (ಮೊದಲ ಪುಟದಿಂದ) ವನ್ಯ ಜೀವಿಗಳು ವಾಸಿಸುವ ದಟ್ಟಾರಣ್ಯ ಬ್ರಹ್ಮಗಿರಿ ವನ್ಯಜೀವಿ ವಿಭಾಗ ಸ್ಥಳವಾದ ಮಾಕುಟ್ಟ ಗ್ರಾಮದ ದೇವಾಲಯ ಅವರಣದಲ್ಲಿ ಕೆಲವು ತಿಂಗಳುಗಳಿಂದ ನಿತ್ಯವೂ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಮಧ್ಯಾಹ್ನದ ನಂತರ ಸಂಜೆಯವರೆಗೆ ಮಾರಾಟ ಉಳಿದ ದಿನಗಳಲ್ಲಿ ಬೆಳಿಗ್ಗೆಯಿಂದಲೇ ಮದ್ಯ ಲಭ್ಯವಾಗುತ್ತಿದೆ. ವನ್ಯ ಮೃಗಗಳ ಸಂರಕ್ಷಣಾ ಅರಣ್ಯದ ಅಂಚಿನಲ್ಲಿ ಮದ್ಯ ಮಾರಾಟ ಮತ್ತು ಉಪಯೋಗಿಸುವದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಗುಪ್ತವಾಗಿ ಮಾರಾಟ ಮಾಡಲಾಗುತ್ತಿದೆ. ಈ ಮದ್ಯ ಮಾರಾಟದ ಪ್ರಮುಖ ರೂವಾರಿ ದೇಗುಲದ ಅಡಳಿತ ಮಂಡಳಿಗೆ ಸನಿಹವಾಗಿರುವವನು. ಈತನಿಗೆ ಅಟೋ ಒಂದಿದ್ದು, ನಿತ್ಯವೂ ವೀರಾಜಪೇಟೆಯಿಂದ ಅಗ್ಗದ ದರದಲ್ಲಿ ಮದ್ಯವನ್ನು ಖರೀದಿಸಿ ಪರಿಚಯಸ್ಥ ಗ್ರಾಮ ವಾಸಿಗಳು ಹಾಗೂ ಸ್ನೇಹಿತರಿಂದ ಅಧಿಕ ಹಣ ಪಡೆದು ಮದ್ಯ ಪ್ರೇಮಿಗಳ ದಾಹ ನೀಗಿಸುತ್ತಾನೆ. ನಿತ್ಯ ಸಾವಿರಾರು ರೂಪಾಯಿಗಳ ಸಂಪಾದನೆಯಾಗುತ್ತಿದೆ. ದೇವಾಲಯಕ್ಕೆ ಭಕ್ತರಂತೆ ಅಗಮಿಸಿ ಸಂಶಯ ಬಾರದಂತೆ ದೇವಾಲಯದ ಆವರಣದೊಳಗೆ ವಿವಿಧ ಕಟ್ಟಡಗಳ ಮಧ್ಯೆ ಯಾರಿಗೂ ಕಾಣಿಸದಂತೆ ಮದ್ಯದ ಬಾಟಲಿಗಳನ್ನು ಅವಿತಿಡಲಾಗುತ್ತದೆ. ಈತನಿಗೆ ಸಹಾಯಕರಾಗಿ ಕೂಟುಹೊಳೆ ನಿವಾಸಿ ಮತ್ತು ಇರಿಟ್ಟಿ ಪಟ್ಟಣದ ವ್ಯಕ್ತಿಯೊಬ್ಬನಿದ್ದು ಕೆಲವು ಏಜೆಂಟರುಗಳು ಗಿರಾಕಿಗಳನ್ನು ಸೆಳೆಯುವಲ್ಲಿ ಸಹಾಯ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದ ಅಡಳಿತ ಮಂಡಳಿಯ ಸಭೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ವಿಷಯವನ್ನು ಪ್ರಸ್ತಾವನೆ ಮಾಡಿದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ವಿಷಯವನ್ನು ಮೊಟಕುಗೊಳಿಸಿ ಸದಸ್ಯರ ಬಾಯಿ ಮುಚ್ಚಿಸುವ ಪ್ರಯತ್ನ ನಡೆದಿದೆ. ಮದ್ಯ ಮಾರಾಟ ಮಾಡಲು ಕೆಲವು ಸ್ಥಳೀಯರ ಸಹಕಾರವಿದೆ. ಈತನ ಸಹಚರರು ದೇವಾಲಯದ ಮುಂಭಾಗದಲ್ಲಿರುವ ಬಸ್ಸು ತಂಗುದಾಣದಲ್ಲಿ ಕುಳಿತು ಗಿರಾಕಿಗಳ ಬರುವಿಕೆಯನ್ನು ಎದುರು ನೋಡುತ್ತಾರೆ. ನಂತರದಲ್ಲಿ ಮಾತುಕತೆ ಅರಂಭಿಸಿ ಸಂಶಯ ಬಾರದಂತೆ ಹಣವು ಬದಲಾಗುತ್ತದೆ. ದೇವಾಲಯದ ಆವರಣದೊಳಗೆ ಈತನ ಸ್ನೇಹಿತರು ತಿಳಿಯದಂತೆ ಮಾಲು ತಂದು ನೀಡುತ್ತಾರೆ. ಸ್ಥಳೀಯರು ಕೆಲವು ದಿನಗಳ ಹಿಂದೆ ಈತನ ವರ್ತನೆಯಿಂದ ಬೇಸತ್ತು ದೂರವಾಣಿಯ ಮೂಲಕ ಪೊಲೀಸರಿಗೆ ಪುಕಾರು ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಪಾಸಣೆಗೆ ಬರುವ ಹೊತ್ತಿನಲ್ಲಿ ಸ್ಥಳದಲ್ಲಿ ಏನೂ ಇರುವದಿಲ್ಲ. ಅರಣ್ಯ ಪ್ರದೇಶದಲ್ಲಿ ಮದ್ಯದ ಬಾಟಲಿಗಳನ್ನು ಅವಿತಿಡಲಾಗುತ್ತದೆ.

ದೇವಾಲಯದ ಅವರಣದೊಳಗೆ ನಡೆಯುತ್ತಿರುವ ಈ ದಂಧೆಯನ್ನು ನಿಲ್ಲಿಸಲು ಪ್ರಜ್ಞಾವಂತ ನಾಗರಿಕ ಸಮಾಜವು ಎಚ್ಚೆತ್ತುಕೊಳ್ಳಬೇಕು; ದಂಧೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರ ಅಗ್ರಹವಾಗಿದೆ.

ಕಿಶೋರ್ ಕುಮಾರ್ ಶೆಟ್ಟಿ