ಮಡಿಕೇರಿ, ಮಾ. 8: ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನ ದೊಂದಿಗೆ ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದ ಗುರಿ ಸಾಧಿಸಬೇಕೆಂದು ಡಿವೈಎಸ್‍ಪಿ ಸುಂದರ್ ರಾಜ್ ಕರೆ ನೀಡಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಶಕ್ತಿಯನ್ನು ಹೊಂದಿರುವದರಿಂದ ಹಿರಿಯರ ಮಾರ್ಗದರ್ಶನವನ್ನು ಎಂದಿಗೂ ತಿರಸ್ಕರಿಸಬಾರದೆಂದು ಸಲಹೆ ನೀಡಿದರು. ವಿದ್ಯಾರ್ಥಿ ಜೀವನದ ಯಶಸ್ಸಿನಿಂದ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು ಅಭಿಪ್ರಾಯಪಟ್ಟ ಸುಂದರ್ ರಾಜ್, ವಿದ್ಯಾರ್ಥಿಗಳಲ್ಲಿ ಮಾನಸಿಕ ಹಾಗೂ ಶಾರೀರಿಕ ಸದೃಢತೆ ಅತಿ ಮುಖ್ಯವೆಂದರು.

ಕೆನರಾ ಬ್ಯಾಂಕ್‍ನ ಸಹಾಯಕ ಮಹಾಪ್ರಬಂಧಕ ವಿ.ಜೆ. ಅರುಣ್ ಮಾತನಾಡಿ ವಿದ್ಯಾರ್ಥಿಗಳು ಇತರರನ್ನೇ ಹೆಚ್ಚಾಗಿ ಅವಲಂಭಿಸದೆ ಸ್ವಾವಲಂಭಿಗಳಾಗಿ ಗುರಿ ಸಾಧಿಸ ಬೇಕೆಂದು ಕರೆ ನೀಡಿದರು. ಆತ್ಮವಿಶ್ವಾಸ ಮತ್ತು ಸತತ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸಾರ್ಥಕತೆಯನ್ನು ಕಾಣಲು ಸಾಧ್ಯವೆಂದು ಅಭಿಪ್ರಾಯಪಟ್ಟ ಅವರು, ಶಿಕ್ಷಕರು ಹಾಗೂ ಪೋಷಕರಿಗೆ ಗೌರವವನ್ನು ನೀಡುವಂತೆ ಕಿವಿ ಮಾತು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕೂಡ ಉತ್ತಮ ಪ್ರತಿಭೆ ಗಳಿದ್ದು, ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆÉ. ಈ ನಿಟ್ಟಿನಲ್ಲಿ ಸಂಘಟನೆ ನಿರಂತರ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಶಿಕ್ಷಕ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ ಎಂದರು. ಅತಿಥಿಗಳು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ದೇವದಾಸ್, ವ್ಯಾಂಡಮ್ ಎಂಟರ್‍ಪ್ರೈಸಸ್‍ನ ಮಾಲೀಕ ಕೆ.ಕೆ. ದಾಮೋದರ್, ಸಮಾಜ ಸೇವಕ ಗಾಳಿಬೀಡಿನ ಟಿ.ಆರ್. ವಾಸುದೇವ, ಉದ್ಯಮಿ ಹೆಚ್.ಎನ್. ಮುಯೀನುದ್ದೀನ್ ಇಮ್ರಾನ್, ಕಾಲೇಜಿನ ಪ್ರಾಧ್ಯಾಪಕ ಡಾ. ದಯನಂದ್ ಹಾಗೂ ದಸಂಸ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಉಪಸ್ಥಿತರಿದ್ದರು.