ಮಡಿಕೇರಿ, ಮಾ. 8: ಇಲ್ಲಿಗೆ ಸಮೀಪದ ಬೋಯಿಕೇರಿ ತಿರುವಿನಲ್ಲಿ ಟ್ಯಾಂಕರ್‍ವೊಂದರಿಂದ ಎಣ್ಣೆ ಸೋರಿಕೆಯೊಂದಿಗೆ ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಉರುಳಿ ಬಿದ್ದರೆ, ಇತರ ವಾಹನಗಳು ಪರಸ್ಪರ ಡಿಕ್ಕಿಯಾಗಿ ಅವಘಡ ಸಂಭವಿಸಿದ ಪ್ರಸಂಗ ಈ ರಾತ್ರಿ 8 ಗಂಟೆಗೆ ಸುಮಾರಿಗೆ ಎದುರಾಗಿದೆ. ಟ್ಯಾಂಕರ್‍ವೊಂದರಲ್ಲಿ ಸನ್‍ಪ್ಯೂರ್ ಎಣ್ಣೆ ಚಾಲಕನ ಅರಿವಿಗೆ ಬಾರದೆ ಸೋರಿಕೆಯಾಗಿರುವ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ವಿಷಯ ತಿಳಿಯುತ್ತಲೆ ಬೋಯಿಕೇರಿಯ ಯುವಕರ ತಂಡವೊಂದು ರಸ್ತೆಗೆ ಮಣ್ಣು ಸುರಿದು ವಾಹನಗಳ ನಿಯಂತ್ರಣಕ್ಕೆ ಮುಂದಾಗಿದೆ. ಆ ಬೆನ್ನಲ್ಲೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಸಹಿತ ಹೆದ್ದಾರಿ ಗಸ್ತು ವಾಹನ ಧಾವಿಸಿ ಹೆಚ್ಚಿನ ಅನಾಹುತವನ್ನು ತಡೆಯುವಲ್ಲಿ ಕಾರ್ಯೋನ್ಮುಖರಾಗಿದ್ದು ಕಂಡು ಬಂತು.ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರೊಂದು (ಕೆಎ19-ಎಂಇ 8886) ಮತ್ತೊಂದು ವಾಹನಕ್ಕೆ ಡಿಕ್ಕಿಯಾದ

ಪರಿಣಾಮ (ಮೊದಲ ಪುಟದಿಂದ) ಸಂಪೂರ್ಣ ನಜ್ಜು ಗುಜ್ಜಾಗಿ ಪೊಲೀಸರ ಸಹಾಯದಿಂದ ಸ್ಥಳಾಂತರಿಸಲ್ಪಟ್ಟಿತ್ತು. ಈ ಸಂದರ್ಭ ಬೇರೊಂದು ವಾಹನ ಆಯ ತಪ್ಪಿ ಡಿಕ್ಕಿಯಾದ ವೇಳೆ ಮತ್ತೊಂದು ವಾಹನ ಚಾಲಕ ಹಾನಿಗೊಳಗಾದ ಬಾಪ್ತು ರೂ. 20 ಸಾವಿರ ವಸೂಲಿ ಮಾಡಿಕೊಂಡು ತೆರಳಿದ್ದಾಗಿಯೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವಘಡ ತಪ್ಪಿಸಲು ಗ್ರಾಮಾಂತರ ಪೊಲೀಸರು ಎಂಸ್ಯಾಂಡ್ (ಜೆಲ್ಲಿ ಪುಡಿ ) ರಸ್ತೆಗೆ ಸುರಿಯುದರೊಂದಿಗೆ ಬ್ಯಾರಿಕೇಡ್‍ಗಳನ್ನು ಅಳವಡಿಸುವ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಪರಿಸ್ಥಿತಿ ಹತೋಟಿಗೆ ತಂದ ದೃಶ್ಯ ‘ಶಕ್ತಿ’ಗೆ ಎದುರಾಯಿತು. ಎಣ್ಣೆ ಸೋರಿಕೆಯಾದ ಟ್ಯಾಂಕರ್ ಬಗ್ಗೆ ಮಾತ್ರ ಸ್ಪಷ್ಟ ಮಾಹಿತಿ ಮತ್ತು ಕಾರಣ ಲಭ್ಯವಾಗಿಲ್ಲ.

-ರಾಜು ರೈ