ವೀರಾಜಪೇಟೆ, ಮಾ. 8: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗುರುತಿಸಿದ ಇಂದಿರಾ ಕ್ಯಾಂಟೀನ್ ಜಾಗವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸಾರಿಗೆ ಸಂಸ್ಥೆಗೆ ವಿಶಾಲವಾದ ಜಾಗವಿರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‍ಗೆ ಬಳಸುವಂತೆ ಖಾಲಿ ವಿವಿಧ ಇಲಾಖೆಯ ಅಧಿಕಾರಿಗಳ ಮುಂದೆ ಆದೇಶಿಸಿದರು.

ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು 6ತಿಂಗಳ ಮೊದಲೇ ಜಾಗವನ್ನು ಗುರುತಿಸಿ ಗುತ್ತಿಗೆದಾರರಿಗೆ ನಿನ್ನೆ ದಿನ ಹಸ್ತಾಂತರಿಸಿ ಕಾಮಗಾರಿ ಆರಂಭಿಸುವ ಸಮಯದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಕರಾರು ತೆಗೆದು ಮುಖ್ಯಾಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇಂದು ಜಿಲ್ಲಾಧಿಕಾರಿ ಭೇಟಿ ನೀಡಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿ ಅಂತಿಮವಾಗಿ ಸಾರಿಗೆ ಸಂಸ್ಥೆಯ ವಿಭಾಗೀಯ ಅಧಿಕಾರಿ ದಿವಾಕರ್ ಅವರಿಗೆ ಸಂಸ್ಥೆಗೆ ಹೇರಳವಾಗಿ ಜಾಗವಿರುವದರಿಂದ ಇಂದಿರಾ ಕ್ಯಾಂಟೀನ್‍ಗೆ ಕೊಡಲು ಸೂಚಿಸಿದ ಮೇರೆಗೆ ಸಂಸ್ಥೆಯ ಅಧಿಕಾರಿಗಳು ಸಮ್ಮತಿ ನೀಡಿದ್ದರಿಂದ ವಿವಾದಕ್ಕೆ ತೆರೆ ಎಳೆಯಲಾಯಿತು.

ಇದರಿಂದ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಆರಂಭಿಸಲು ತಾ. 9ರಂದು (ಇಂದು) ಭೂಮಿ ಪೂಜೆ ನೆರವೇರಲಿದೆ. ಕ್ಯಾಂಟೀನ್ ನಿರ್ಮಾಣದ ಜಾಗದಲ್ಲಿ ಶತಮಾನಗಳ ಹಿಂದಿನ ಭಾರೀ ಗಾತ್ರದ ಮರಗಳಿದ್ದು ಅಗತ್ಯ ಬಿದ್ದರೆ ಮಾತ್ರ ಮರಗಳನ್ನು ಕಡಿಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ತಾಲೂಕು ತಹಸಿಲ್ದಾರ್ ಆರ್. ಗೋವಿಂದರಾಜು, ಚೆಸ್ಕಾಂ, ಅರಣ್ಯ, ರೆವಿನ್ಯೂ, ಲೋಕೋಪಯೋಗಿ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಹೇಮ್ ಕುಮಾರ್, ಪೊಲೀಸ್ ಅಧಿಕಾರಿಗಳಾದ ನಾಗಪ್ಪ, ಕುಮಾರ್ ಆರಾಧ್ಯ, ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಜಾಗದ ವಿವಾದದ ಸಂಬಂಧದಲ್ಲಿ ನಿನ್ನೆ ಮುಖ್ಯಾಧಿಕಾರಿ ಕ್ರಷ್ಣ ಪ್ರಸಾದ್ ವಿರುದ್ಧ ನೀಡಿದ್ದ ದೂರನ್ನು ಸಂಸ್ಥೆ ಇಂದು ಹಿಂದಿರುಗಿ ಪಡೆದಿದ್ದಾರೆ.