ಮಡಿಕೇರಿ, ಮಾ. 8: ಕೊಡಗು ಜಿಲ್ಲೆಗೆ ಸವಾಲಾಗಿರುವ ಪ್ರಮುಖ ಸಮಸ್ಯೆಗಳು; ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಜನತೆಯ ಮನ ಗೆಲ್ಲುವ ರಣ ನೀತಿ; ಸೂಕ್ಷ್ಮ ಪರಿಸರ ತಾಣ, ರೈಲ್ವೆ ಯೋಜನೆ, ಕಾಡಾನೆ ಹಾವಳಿ; ಜನಾಂಗೀಯ ಅಸಹನೆ; ಮತೀಯ ದ್ವೇಷ; ರಾಜಕೀಯ ಗುಂಪುಗಾರಿಕೆ; ಅಭಿವೃದ್ಧಿ ಯೋಜನೆಗಳ ಕುಂಠಿತ, ಶಾಸಕರು - ಮಂತ್ರಿಗಳ ನಡುವಿನ ಹೊಂದಾಣಿಕೆ ಕೊರತೆ; ಸಂಸದರಿಂದ ಕೊಡಗಿನ ಕಡೆಗಣನೆ ಇತ್ಯಾದಿ ಪ್ರಶ್ನೆಗಳು ಪತ್ರಿಕಾ ಮಿತ್ರರಿಂದ ತೇಲಿ ಬಂದರೆ; ಜೆಡಿಎಸ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರು ಸಹನೆಯಿಂದ ಉತ್ತರಿಸುವ ಪ್ರಯತ್ನ ಮಾಡಿದರು. ಆಡಳಿತಾರೂಢ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮಾತ್ರ ಗೈರು ಹಾಜರಾಗಿದ್ದರು. ಇಂದು ಕೊಡಗು ಪ್ರೆಸ್‍ಕ್ಲಬ್ ಆಯೋಜಿಸಿದ್ದ ಜಿಲ್ಲೆಯ ಮೂರು ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರುಗಳೊಂದಿಗೆ ಸಂವಾದ ಕಾರ್ಯಕ್ರಮದ ಹೂರಣವಿದು.ಬಿಜೆಪಿ ಸ್ಥಾನಗಳು ಭದ್ರಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ಕೊಡಗಿನಲ್ಲಿ ಸತತವಾಗಿ ಗೆದ್ದುಕೊಂಡು ಬಂದಿರುವ ಎರಡು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಮುಂದಿನ ಚುನಾವಣೆ ಯಲ್ಲಿಯೂ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕುಶಾಲನಗರ ತನಕ ರೈಲ್ವೆ ಸಂಪರ್ಕ; ಸೂಕ್ಷ್ಮ ಪರಿಸರ ತಾಣ ಅನುಷ್ಠಾನ ಸಂಬಂಧ ಬಿಜೆಪಿ ತನ್ನ ಇದುವರೆಗಿನ ನಿಲುವಿಗೆ ಬದ್ಧವಿದ್ದು; ತಲಚೇರಿಯಿಂದ ವೀರಾಜಪೇಟೆ ಮಾರ್ಗವಾಗಿ ಮೈಸೂರಿಗೆ ರೈಲ್ವೆ ಯೋಜನೆಗೆ ಯಾವ ಕಾರಣಕ್ಕೂ ಅವಕಾಶ ನೀಡುವದಿಲ್ಲವೆಂದು ಸ್ಪಷ್ಟಪಡಿಸಿದರು.

ಹಿಂದಿನ ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ ಕೊಡಗಿಗೆ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು; ಆರು ಪದವಿ ಪೂರ್ವ ಕಾಲೇಜುಗಳು,

(ಮೊದಲ ಪುಟದಿಂದ) ಸಾಕಷ್ಟು ಪ್ರೌಢಶಾಲೆಗಳು ಸಹಿತ ಅಗತ್ಯ ಕಟ್ಟಡಗಳು, ಪೊಲೀಸ್ ವಸತಿ ಗೃಹಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಿತ ರಸ್ತೆ ಅಭಿವೃದ್ಧಿ; ಗ್ರಾಮೀಣ ವಿದ್ಯುತ್ ಯೋಜನೆಗೆ ಒತ್ತು ನೀಡಿದ್ದಾಗಿ ಸಮರ್ಥನೆ ನೀಡಿದರು.

ಪ್ರಸಕ್ತ ಕಾಂಗ್ರೆಸ್ ಆಳ್ವಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು; ಕೊಡಗಿನ ಇಬ್ಬರು ಬಿಜೆಪಿ ಶಾಸಕರನ್ನು ಕಡೆಗಣಿಸುತ್ತಾ; ಶಾಸಕರು ಸರಕಾರಕ್ಕೆ ಸಲ್ಲಿಸುವ ಕ್ರಿಯಾಯೋಜನೆಗಳನ್ನು ಬಳಸಿಕೊಂಡು ಬಿಡುಗಡೆಗೊಳ್ಳುವ ಅನುದಾನವನ್ನು ಸಚಿವರ ಆಪ್ತರ ಮುಖಾಂತರ ಭೂಮಿ ಪೂಜೆ ನಡೆಸುತ್ತಿರುವದು ಜಿಲ್ಲೆಗೆ ಎಸಗುತ್ತಿರುವ ಅಪಮಾನವೆಂದು ಟೀಕಿಸಿದರು.

ಶಾಸಕರುಗಳು ಕ್ಷೇತ್ರದ ಜನತೆಗೆ ಸಾಧ್ಯವಿರುವ ಕೆಲಸ ಕೈಗೊಂಡಿದ್ದು; ಸಂಸದರು ಕೂಡ ಬಿಜೆಪಿಯವರೇ ಆಗಿದ್ದು; ಜಿ.ಪಂ. ಸಹಿತ ಸ್ಥಳೀಯ ಸಂಸ್ಥೆಗಳು ಪಕ್ಷದ ಹಿಡಿತವಿರುವ ಕಾರಣಕ್ಕಾಗಿ ಸಚಿವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು; ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನಿರ್ದೇಶನದಂತೆ ಬಿಜೆಪಿ ಮುಂದಿನ ಚುನಾವಣೆ ಎದುರಿಸಲು ಸಜ್ಜಾಗಿದ್ದು; ಜನಪರ ಕಾರ್ಯಕ್ರಮಗಳ ಪ್ರಣಾಳಿಕೆ ಸಿದ್ಧಗೊಳಿಸುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸುವರ್ಣ ಭವನ, ಮಿನಿ ವಿಧಾನಸೌಧ, ಜಿ.ಪಂ. ಕಟ್ಟಡ, ರಸ್ತೆಗಳು, ಸಿಬ್ಬಂದಿ ಕೊರತೆ ಇತ್ಯಾದಿ ಸೇರಿದಂತೆ ಸರಕಾರದಿಂದ ಸ್ಪಂದನೆ ದೊರಕದಿರುವ ಕಾರಣ ಶಾಸಕರುಗಳು ಏನೂ ಮಾಡಲು ಆಗುತ್ತಿಲ್ಲ ಎಂದರಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಡಗಿನ ಏಳಿಗೆಯೊಂದಿಗೆ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕುಗಳ ರಚನೆಗೂ ಗಮನ ಹರಿಸುವದಾಗಿ ನುಡಿದರು.

ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ತನ್ನ ವಿರೋಧ ಮುಂದುವರಿಸಲಿದೆ ಎಂದು ಉಚ್ಚರಿಸಿದ ಭಾರತೀಶ್; ಇಂಥ ಆಚರಣೆಯಿಂದ ಕೊಡಗಿನಲ್ಲಿ ಅಶಾಂತಿಯೊಂದಿಗೆ ಪ್ರವಾಸೋದ್ಯಮಕ್ಕೆ ತೊಂದರೆಯಾಗುತ್ತಿದ್ದು, ಬಿಜೆಪಿ ಸರಕಾರ ಈ ದಿಸೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿರುವದಾಗಿ ಭವಿಷ್ಯ ನುಡಿದರು.

(ಮೊದಲ ಪುಟದಿಂದ) ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಹಿರಿತನ ಹಾಗೂ ರಾಜಕೀಯ ಅನುಭವಕ್ಕಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ವರಿಷ್ಠರು ಟಿಕೆಟ್ ನೀಡಿದ್ದು; ಮಾಜೀ ಸಚಿವ ಯಂ.ಸಿ. ನಾಣಯ್ಯ ತಮಗೆ ಪಕ್ಷದ ವರಿಷ್ಠರು ನೀಡಿರುವ ಇದುವರೆಗಿನ ಸ್ಥಾನಮಾನ ಮತ್ತು ಮಂತ್ರಿ ಪದವಿ ಅನುಭವಿಸಿರುವ ಋಣ ತೀರಿಸಲು ಜೆಡಿಎಸ್‍ಗೆ ಶ್ರಮಿಸಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೊಡಗಿನಲ್ಲಿ ಕಾಡಾನೆ ಮತ್ತು ವನ್ಯಮೃಗಗಳ ಧಾಳಿಯಿಂದ ಪ್ರತಿನಿತ್ಯ ಮಾನವ ಮತ್ತು ಜಾನುವಾರುಗಳು ಸಾಯುವ ಆತಂಕ ಎದುರಾಗಿದ್ದು, ರಾಜ್ಯದ ಮುಖ್ಯಮಂತ್ರಿ; ಅರಣ್ಯ ಸಚಿವರು ಕೊಡಗನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷ ಗೆಲವು ಸಾಧಿಸಿದರೆ ಕಾಡಾನೆ ಸಮಸ್ಯೆಗೆ ಪರಿಹಾರ; ದಿಡ್ಡಳ್ಳಿ ನಿರಾಶ್ರಿತರ ಸಹಿತ ವಸತಿ ರಹಿತರಿಗೆ ಆಸರೆ; ಗ್ರಾಮೀಣ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮತ್ತು ಜನರಿಗೆ ನ್ಯಾಯ ಕೊಡಿಸಲು ನಿರಂತರ ಹೋರಾಟ ಮುಂದುವರಿಸುವದಾಗಿ ಅವರು ಪ್ರಕಟಿಸಿದರು.

ಜೆಡಿಎಸ್ ಗುಂಪುಗಾರಿಕೆ ಬಗ್ಗೆ ಪ್ರಸ್ತಾಪಿಸಿ ಪ್ರಜಾಪ್ರಭುತ್ವದಲ್ಲಿ ಇದೆಲ್ಲವೂ ಸಹಜವೆಂದು ಸಮರ್ಥಿಸಿಕೊಂಡರು.

ಒಟ್ಟಿನಲ್ಲಿ ಕೊಡಗಿನ ಜ್ವಲಂತ ಸಮಸ್ಯೆಗಳು; ಕೋಮು ದಳ್ಳುರಿ, ರೈಲ್ವೆ ಯೋಜನೆ, ಸೂಕ್ಷ್ಮ ಪರಿಸರ ವಿವಾದ, ಕಾಡಾನೆ ಹಾವಳಿ; ವನ್ಯಮೃಗಳಿಗೆ ನಿತ್ಯ ಬಲಿಯಾಗುತ್ತಿರುವ ಗೋವುಗಳು; ರಸ್ತೆಗಳ ಅವ್ಯವಸ್ಥೆ; ವಿದ್ಯುತ್ ಸಮಸ್ಯೆ; ಸರಕಾರಿ ಆಯೋಜಿತ ಟಿಪ್ಪು ಜಯಂತಿ ಗೊಂದಲ, ಜನಾಂಗೀಯ ಒಡಕು ಇತ್ಯಾದಿ ಬಗ್ಗೆ ಉತ್ತರಿಸಲು ಆಡಳಿತಾರೂಢ ಕಾಂಗ್ರೆಸ್ ಅಧ್ಯಕ್ಷ ಗೈರುವಿನಿಂದಾಗಿ ಪ್ರಮುಖ ಪಕ್ಷಗಳ ಅಧ್ಯಕ್ಷರುಗಳೊಂದಿಗಿನ ಸಂವಾದ ಅಪೂರ್ಣವೆನಿಸಿತು.

ಈ ಬಗ್ಗೆ ಪ್ರೆಸ್‍ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಸೂಚ್ಯವಾಗಿ ಪ್ರಸ್ತಾಪಿಸಿ; ಶಿವು ಮಾದಪ್ಪ ಆಗಮಿಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಕಾರ್ಯದರ್ಶಿ ಸುಬ್ರಮಣಿ ನಿರೂಪಿಸಿ;’ ಭೂತನಕಾಡು ವಿಘ್ನೇಶ್ ಸ್ವಾಗತಿಸಿದರು. ‘ಶಕ್ತಿ’ ಸಂಪಾಧಕ ಜಿ. ಚಿದ್ವಿಲಾಸ್, ‘ಪ್ರಜಾಸತ್ಯ’ ಸಂಪಾದಕ ಡಾ. ನವೀನ್, ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಸೇರಿದಂತೆ ಮಾಧ್ಯಮ ಮಿತ್ರರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ನಾಗರಾಜಶೆಟ್ಟಿ ವಂದಿಸಿದರು.