ಸೋಮವಾರಪೇಟೆ, ಮಾ.8 : ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರಗಳು ನಡೆಯುತ್ತಿದ್ದು, ಇದನ್ನು ವಿರೋಧಿಸಿ ತಾ. 12ರಂದು ಪೂರ್ವಾಹ್ನ 11 ಗಂಟೆಗೆ ಸೋಮವಾರಪೇಟೆ ತಾ.ಪಂ. ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಕ್ಷೇತ್ರ ಜೆಡಿಎಸ್ ವಕ್ತಾರ ಕೃಷ್ಣಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಕಡೆಗಣಿಸುತ್ತಿದ್ದು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಗ್ರಾ.ಪಂ. ಸದಸ್ಯರ ಮೇಲೆ ಹಲ್ಲೆ, ಬೆದರಿಕೆ ಒಡ್ಡಲಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ ಸಹ ಕ್ಷೇತ್ರದ ಶಾಸಕರು ಮೌನಕ್ಕೆ ಶರಣಾಗಿದ್ದಾರೆ ಎಂದು ದೂರಿದ ಕೃಷ್ಣಪ್ಪ ಅವರು, ತಾ.ಪಂ.ನಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷರಿದ್ದು, ಬಿಜೆಪಿ ಬೆಂಬಲಿತ ಉಪಾಧ್ಯಕ್ಷರು ಅಧ್ಯಕ್ಷರ ಅಧಿಕಾರವನ್ನು ಹೈಜಾಕ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ತಾ. 12ರಂದು ಪ್ರತಿಭಟನೆ ಮಾಡಲಾಗುವದು ಎಂದರು.
ಗ್ರಾ.ಪಂ.ನಲ್ಲಿ ವಸತಿ ಯೋಜನೆಯ ಫಲಾನುಭವಿಗಳಿಂದ ತಲಾ 25 ಸಾವಿರ ಹಣವನ್ನು ಪಡೆದಿರುವದು ಮತ್ತು ಈಗಾಗಲೇ ಮನೆ ಹೊಂದಿರುವವರಿಗೆ ಮತ್ತೆ ಮನೆ ನೀಡುವದರ ವಿರುದ್ಧ ತಾನು ದೂರು ನೀಡಿದ್ದರಿಂದಾಗಿ ತನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ಗೋಷ್ಠಿಯಲ್ಲಿದ್ದ ಗ್ರಾ.ಪಂ. ಸದಸ್ಯ ಪ್ರಸನ್ನಕುಮಾರ್ ಆರೋಪಿಸಿದರು.
ಸರ್ಕಾರಿ ಶಾಲಾ ಆವರಣದಲ್ಲಿ ಬಿಜೆಪಿಯವರು ಕಾರ್ಯಕ್ರಮ ನಡೆಸಿದ ಬಗ್ಗೆ ತಾನು ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಇದರಿಂದ ಕೆರಳಿರುವ ತಾ.ಪಂ. ಉಪಾಧ್ಯಕ್ಷರು ತನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ಪ್ರಸನ್ನಕುಮಾರ್ ತಿಳಿಸಿದರು.
ಗೋಷ್ಠಿಯಲ್ಲಿದ್ದ ಮಾದಾಪುರ ಹೋಬಳಿ ಜೆಡಿಎಸ್ ಅಧ್ಯಕ್ಷ ಹೆಚ್.ಪಿ. ವಿಕ್ರಂ ಮಾತನಾಡಿ, ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೆಲವರು ಗೂಂಡಾವರ್ತನೆ ಮಾಡಿ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.