ಕೂಡಿಗೆ, ಮಾ. 7 : ಮಾಂಸ ಮಾರಾಟ ಮಾಡಲು ಮಳಿಗೆಗಳೇ ಇಲ್ಲದಿದ್ದರೂ ಪಂಚಾಯಿತಿ ಹರಾಜು ಪ್ರಕ್ರಿಯೆಗೆ ಮುಂದಾಗಿರುವ ವಿಚಿತ್ರ ಹಾಗೂ ವಿಶೇಷ ಪ್ರಸಂಗ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಂಡು ಬಂತು. ಮಳಿಗೆಗಳೇ ಇಲ್ಲದ್ದರಿಂದ ವ್ಯಾಪಾರ ಮಾಡುವದಾದರೂ ಎಲ್ಲಿ ಎಂದು ಪ್ರಶ್ನಿಸಿದ ಟೆಂಡರ್‍ದಾರರು ಹರಾಜಿನಲ್ಲಿ ಭಾಗವಹಿಸದೆ ತಿರಸ್ಕರಿಸಿದ ಪ್ರಸಂಗವೂ ಎದುರಾಯಿತು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2018-19ನೇ ಸಾಲಿನ ಮಾಂಸ ಮಾರಾಟ ಹರಾಜು ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕೂಡಿಗೆಯ ಸರ್ಕಲ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯ್ತಿಗೆ ಒಳಪಡುವ ಮಾಂಸ ಮಾರಾಟ ಮಳಿಗೆಗಳು ಇಲ್ಲದಿರುವದರಿಂದ ಟೆಂಡರ್ ಕರೆದು ಮಾಂಸ ಮಾರಾಟ ಮಾಡಲು ಖಾಸಗಿ ಮಳಿಗೆಗಳನ್ನು ಅವಲಂಭಿಸಬೇಕಾಗುತ್ತದೆ. ಇದರ ಬದಲು ಗ್ರಾಮ ಪಂಚಾಯಿತಿ ವತಿಯಿಂದ ನಿಗದಿಪಡಿಸಿ, ಮಳಿಗೆಗಳನ್ನು ನಿರ್ಮಿಸಿಕೊಟ್ಟಲ್ಲಿ ಗ್ರಾಹಕರಿಗೂ ಹಾಗೂ ಮಾಲೀಕರಿಗೂ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಟೆಂಡರ್‍ದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದೆ ಹಿಂದೆ ಸರಿದಿದ್ದಾರೆ. ಕಳೆದ ಸಾಲಿನಲ್ಲಿ ಕೋಳಿ, ಆಡು, ಹಂದಿ ಮತ್ತು ಮೀನು ಮಾರಾಟದ ಹರಾಜು ಪ್ರಕ್ರಿಯೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗೆ ಹಣ ಕ್ರೋಢಿಕರಣವಾಗಿತ್ತು.

ಈ ಸಾಲಿನಲ್ಲಿ ಮಳಿಗೆಗಳಿಲ್ಲದೆ ಇರುವದರಿಂದ ಹರಾಜು ಪ್ರಕ್ರಿಯೆ ಮುಂದಿನ ತಾ.14 ಕ್ಕೆ ಮುಂದೂಡ ಲ್ಪಟ್ಟಿದೆ. ಈ ಹಿಂದೆ ಕಾವೇರಿ ನದಿ ದಡದಲ್ಲಿ ಮಾಂಸ ಮಾರಾಟ ಮಳಿಗೆಗಳನ್ನು ನಿರ್ಮಿಸಿ ಹರಾಜು ಮಾಡಲಾಗಿತ್ತು. ಇದೀಗ ನದಿ ತಟದ ಮಳಿಗೆಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ಮಳಿಗೆಗಳು ಇಲ್ಲದಂತಾಗಿದೆ.

-ಕೆ.ಕೆ.ಎನ್. ಶೆಟ್ಟಿ