ಮಡಿಕೇರಿ, ಮಾ. 7 : ರಾಜ್ಯದ ಗಡಿಯಂಚಿನಲ್ಲಿರುವ ಕೊಡಗಿನಲ್ಲಿ ಬ್ರೀಟಿಷರ ಆಳ್ವಿಕೆಯಿಂದಾಗಿಯೂ ಕನ್ನಡವನ್ನು ಉಳಿಸಲು ಸವಾಲಾಗಿದ್ದಂತಹ ದಿನಗಳಲ್ಲಿ ಕೊಡಗಿನ ಅರಸರು ವಿವಿಧ ರೀತಿಯ ಕನ್ನಡಪರ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡವನ್ನು ಉಳಿಸುವಲ್ಲಿ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವೀರಾಜಪೇಟೆಯ ಕಳಂಚೇರಿ ಮಠದ ಎಸ್.ಎಂ.ಎಸ್. ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ದಿ. ಶಾಂತಮಲ್ಲಸ್ವಾಮಿ ದತ್ತಿ ಉಪನ್ಯಾಸ ಹಾಗೂ ವಿದ್ಯಾಸಂಸ್ಥೆಗಳಿಗೆ ಪುಸ್ತಕ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೊಡಗು ಗಡಿಭಾಗ ಆಗಿದ್ದರಿಂದ ಇಲ್ಲಿನ ಕನ್ನಡೇತರ ಭಾಷಿಗರು ಹೆಚ್ಚು ನೆಲಿಸಿದ್ದ ಕಾರಣ ಕನ್ನಡಕ್ಕೆ ಸಿಗಬೇಕಾದ ಮಾನ್ಯತೆ ಸಿಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಉಳಿಸಲು ಶಾಂತಮಲ್ಲಸ್ವಾಮಿಗಳು ಅಂದಿನ ಕಾಲದಲ್ಲೇ ವಿವಿಧೆಡೆಗಳಿಂದ ಸಾಹಿತ್ಯ ಪುಸ್ತಕಗಳನ್ನು ಸಂಗ್ರಹಿಸಿ ತರುವ ಮುಖಾಂತರ ಕನ್ನಡ ಸಾಹಿತ್ಯದ ಉಳಿವಿಗೆ ಶ್ರಮ ವಹಿಸಿದ್ದರು ಎಂದು ಹೇಳಿದರು.
ಕನ್ನಡಕ್ಕಾಗಿ ದುಡಿದ ಕಸಾಪ ಗಣ್ಯರ ಹೆಸರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಾಲೆಗಳಿಗೆ ಪುಸ್ತಕಗಳನ್ನು ನೀಡಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್, ಕರ್ನಾಟಕದ ಗಡಿಯಂಚಿನ ಕೊಡಗಿನಲ್ಲಿ ಕನ್ನಡ ಭಾಷಾ ಭದ್ರತೆಗೆ ಛಲತೊಟ್ಟು ನಿಂತವರ ಪಟ್ಟಿಯಲ್ಲಿ ದಿ. ರಘುನಾಥ್ ನಾಯಕ್ ಅವರು ಪ್ರಮುಖರಲ್ಲೊಬ್ಬರು. ಅವರ ನೆನಪಿಗಾಗಿ ಈ ವಿದ್ಯಾಸಂಸ್ಥೆಗೆ ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಬಾಲ್ಯದಿಂದಲೇ ಶಿಕ್ಷಣದೊಂದಿಗೆ ಸಾಹಿತ್ಯ ಹಾಗೂ ಕಲೆಯನ್ನು ಬೆಳೆಸಿಕೊಂಡಲ್ಲಿ ಸುಸಂಸ್ಕøತ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದರು.
ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲಾ ಶಿಕ್ಷಕ ದೇವೆರ್ ಅವರು ‘ಕನ್ನಡ ಸಾಹಿತ್ಯದಲ್ಲಿ ಕೊಡಗಿನ ಅರಸು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭ ದಿ. ರಘುನಾಥ್ ನಾಯಕ್ ಅವರ ಜೀವಿತಾವಾಧಿಯಲ್ಲಿ ಅವರು ಕನ್ನಡಕ್ಕಾಗಿ ದುಡಿದದ್ದನ್ನು ಗುರುತಿಸಿ ಅವರಿಗೆ ಸಹಕಾರ ನೀಡಿದ ಅವರ ಪತ್ನಿ ಶಶಿಕಾಂತಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಧೋಶ್ ಪೂವಯ್ಯ, ಬೇಬಿ ಚಿಣ್ಣಪ್ಪ, ಎಸ್.ಎಂ.ಎಸ್. ವಿದ್ಯಾಪೀಠದ ಪ್ರಾಂಶುಪಾಲೆ ಕೆ.ಟಿ. ಕುಸುಮ್, ಸಾಯಿನಾಥ್, ಸಾಹಿತಿ ವೈಲೇಶ್ ಹಾಗೂ ವಿದ್ಯಾಸಂಸ್ಥೆಯ ಶಿಕ್ಷಕ ವೃಂದದವರು ಇದ್ದರು.