ಕುಶಾಲನಗರ, ಮಾ. 7: ಕುಶಾಲನಗರ ಟೌನ್ ಕಾಲನಿಯಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯಲ್ಲಿ ಭಾರೀ ಸ್ಪೋಟ ಸಂಭವಿಸುವದ ರೊಂದಿಗೆ ಸುತ್ತಮುತ್ತಲಿನ ಜನ ಬೆದರಿದ ಘಟನೆ ಮಧ್ಯಾಹ್ನ ವೇಳೆ ಎದುರಾಯಿತು.

ಕಳೆದ 1 ತಿಂಗಳ ಹಿಂದೆ ನಿರ್ಮಿಸಿದ್ದ ಕಾಂಕ್ರಿಟ್ ರಸ್ತೆ ಏಕಾಏಕಿ ಬಿರುಕು ಕಾಣಿಸುವದರೊಂದಿಗೆ ಸದ್ದು ಕೇಳಿ ಭಯಭೀತರಾದ ಜನತೆ ನೋಡಿದ ಸಂದರ್ಭ ಕಳಪೆ ಕಾಮಗಾರಿಯಿಂದ ಕೂಡಿದ ರಸ್ತೆ ಒಡೆದು ನಿಂತಿರುವ ದೃಶ್ಯ ಗೋಚರಿಸಿತು. ಕುಶಾಲನಗರ ಮಾರುಕಟ್ಟೆಯ ಚೆಸ್ಕಾಂ ಕಛೇರಿ ಬಳಿ ಈ ಘಟನೆ ನಡೆದಿದ್ದು ಇದನ್ನು ಗಮನಿಸಿದ ಸ್ತಳೀಯ ಯುವಕರು ಸ್ವಲ್ಪ ಕಾಲ ರಸ್ತೆ ತಡೆದು ಪ್ರತಿಭಟಿಸಿದ ಪ್ರಸಂಗವೂ ನಡೆಯಿತು. ಕೂಡಲೇ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಪಂಚಾಯಿತಿ ಇಂಜಿನಿಯರ್ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಕಳಪೆ ಗುಣಮಟ್ಟ ದಿಂದ ಕೂಡಿದ ರಸ್ತೆಯನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯರಾದ ಮಹದೇವ್, ಪ್ರಸಾದ್, ಕಮರ್, ಮಹಮ್ಮದ್ ಇಸ್ಮಾಯಿಲ್ ಮತ್ತಿತರರು ಇದ್ದರು.