ಸಿದ್ದಾಪುರ, ಮಾ. 7: ಹುಲಿಯ ಅಟ್ಟಹಾಸಕ್ಕೆ ಹಾಲು ಕರೆಯುವ ಹಸುವೊಂದು ಬಲಿಯಾಗಿರುವ ಘಟನೆ ಮಾಲ್ದಾರೆಯ ಕಾಫಿ ತೋಟದಲ್ಲಿ ನಡೆದಿದೆ. ಕಳೆದ 3 ದಿನಗಳ ಹಿಂದೆ ಶ್ರೀಮಂಗಲದಲ್ಲಿ ಹುಲಿಯು ಕೊಟ್ಟಿಗೆಯಿಂದ ಹಾಲು ಕರೆಯುವ ಹಸುವನ್ನು ಸಾಯಿಸಿರುವ ಘಟನೆ ಮಾಸುವ ಮುನ್ನವೇ ಮಾಲ್ದಾರೆ ಗ್ರಾಮದ ಶ್ರೀನಿವಾಸ ಎಸ್ಟೇಟ್ನಲ್ಲಿ ನಿನ್ನೆ ದಿನ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ಧಾಳಿ ನಡೆಸಿ ಸಾಯಿಸಿದೆ.ಮಾಲ್ದಾರೆಯ ಕಲ್ಲಳ್ಳ ಚೊಟ್ಟೆಪಾರೆ ನಿವಾಸಿಯಾಗಿರುವ ಶಂಕರಕುಟ್ಟಿ ಎಂಬವರಿಗೆ ಸೇರಿದ ಹಾಲು ಕರೆಯುವ ಹಸು ಮೇಯಲೆಂದು ಸಮೀಪದ ತೋಟಕ್ಕೆ ಹೋದ ಸಂದರ್ಭದಲ್ಲಿ ಹುಲಿ ಧಾಳಿಗೆ ಸಿಲುಕಿ ಸಾವನ್ನಪ್ಪಿದೆ. ಬುಧವಾರದಂದು ಶ್ರೀನಿವಾಸ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡಲು ತೆರಳುತ್ತಿದ್ದ ಸಂದರ್ಭ ಕಾಫಿ ತೋಟದ ಮಧ್ಯಭಾಗದಲ್ಲಿ ಹಸುವನ್ನು ಹುಲಿ ಧಾಳಿ ನಡೆಸಿ ಸಾಯಿಸಿರುವ ವಿಚಾರ ತಿಳಿದು ಬಂದಿತು ಎನ್ನಲಾಗಿದೆ. ನಂತರ ತೋಟದ ರೈಟರ್ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ
(ಮೊದಲ ಪುಟದಿಂದ) ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ತಿತಿಮತಿ ಎಸಿಎಫ್ ಶ್ರೀಪತಿ ಭೇಟಿ ನೀಡಿದರು. ಜರ್ಸಿ ತಳಿಯ ಬೆಲೆಬಾಳುವ ಹಸು ಮೃತಪಟ್ಟ ಹಿನ್ನೆಲೆಯಲ್ಲಿ ಶಂಕರ್ ಕುಟ್ಟಿ ಅವರು ಅಪಾರ ನಷ್ಟ ಸಂಭವಿಸಿದೆ. ಹುಲಿಯು ಕಳೆದ ಮೂರು ದಿನಗಳಿಂದ ಮಾಲ್ದಾರೆಯ ವ್ಯಾಪ್ತಿಯ ಅರಣ್ಯದಂಚಿನ ರಸ್ತೆಗಳ ಬದಿಯಲ್ಲಿ ಪ್ರತ್ಯಕ್ಷವಾಗುತ್ತಿದೆ ಎಂದು ಮಾಲ್ದಾರೆಯ ನಿವಾಸಿಗಳು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಮಾಲ್ದಾರೆಯ ಜೋಸ್ ಕುರಿಯನ್ ಅವರ ಕಾಫಿ ತೋಟದಲ್ಲಿ 2 ಹಸುಗಳನ್ನು ಸಾಯಿಸಿದ್ದವು. ನಂತರ ಬಿಬಿಟಿಸಿ ಕಂಪೆನಿಗೆ ಸೇರಿದ ಹಸುವನ್ನು ಕೂಡ ಸಾಯಿಸಿ ವ್ಯಾಘ್ರ ತನ್ನ ಅಟ್ಟಹಾಸ ಮುಂದುವರಿಸಿದೆ. ಈತನ್ಮಧ್ಯೆ ಬೀಟಿಕಾಡು ತೋಟದೊಳಗೆ ಕೂಡ ಕಾಡುಕೋಣವೊಂದರ ಮೇಲೆ ಧಾಳಿ ನಡೆಸಿ ಅರ್ಧಭಾಗದಷ್ಟು ತಿಂದು ಪರಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹುಲಿಯ ಹಾವಳಿಯಿಂದಾಗಿ ಹಾಗೂ ಜನವಸತಿ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಸಿದ್ದಾಪುರ ಸಮೀಪದ ಸ್ವರ್ಣಗಿರಿ ಕಾಫಿತೋಟದೊಳಗೆ ಬೋನ್ ಇರಿಸಿದರೂ ಹುಲಿ ಸೆರೆಯಾಗಲಿಲ್ಲ.
ನಂತರ ವೀರಾಜಪೇಟೆ ಡಿಎಸಿಎಫ್ ಮರಿಯ ಕ್ರಿಸ್ತುರಾಜ್ ಅರಣ್ಯ ಸಿಬ್ಬಂದಿಗಳಿಗೆ ಹುಲಿಯನ್ನು ತೋಟದಿಂದ ಓಡಿಸಲು ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ನಡೆಸಲು ತಿಳಿಸಿದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಇತ್ತೀಚೆಗೆ ಬೀಟಿಕಾಡು ತೋಟದಲ್ಲಿ ಪಟಾಕಿ ಸಿಡಿಸಿ ಹುಲಿಯನ್ನು ಓಡಿಸಲು ಮುಂದಾದರು. ಆದರೆ ಹುಲಿಯು ಇದೀಗ ಮತ್ತೊಮ್ಮೆ ಜನ ವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷಗೊಂಡು ಹಸುವೊಂದನ್ನು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾರ್ಮಿಕರು ಭಯಭೀತರಾಗಿದ್ದಾರೆ. ಹುಲಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಬೋನ್ ಇರಿಸಲಾಗುವದೆಂದು ತಿತಿಮತಿ ಎಸಿಎಫ್ ಶ್ರೀಪತಿ ಹಾಗೂ ವೀರಾಜಪೇಟೆ ಎಸಿಎಫ್ ರೋಶಿಣಿ ತಿಳಿಸಿದ್ದಾರೆ. ಗ್ರಾಮಸ್ಥರು ಹುಲಿಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಮಾಂಸ ರುಚಿ ಕಂಡುಕೊಂಡ ವ್ಯಾಘ್ರ!
ಮಾಲ್ದಾರೆಯ ಶ್ರೀನಿವಾಸ ಕಾಫಿ ತೋಟದಲ್ಲಿ ಹುಲಿಯು ಹಾಲು ಕರೆಯುವ ಹಸುವನ್ನು ಬಲಿ ಪಡೆಯುವ ಮುನ್ನ ಹಸುವನ್ನು ಎಳೆದಾಡಿರುವ ಕುರುಹುಗಳು, ಹೆಜ್ಜೆ ಗುರುತುಗಳು ಸ್ಥಳದಲ್ಲಿ ಕಂಡು ಬಂದಿದೆ. ಹಸುವನ್ನು ಸಾಯಿಸಿದ ಹುಲಿಯು ಹಸುವಿನ ಹಿಂಭಾಗದಿಂದ ಮಾಂಸದ ಖಂಡವನ್ನು ತಿಂದು ಹೊಟ್ಟೆ ಭಾಗವನ್ನು ಸೀಳಿದೆ. ಸ್ಥಳಕ್ಕೆ ಪಾಲಿಬೆಟ್ಟ ಪಶುವೈದ್ಯಾಧಿಕಾರಿ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು.
-ಚಿತ್ರ, ವರದಿ : ವಾಸು