ಮಡಿಕೇರಿ, ಮಾ. 7: ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕಾ ಭವನದಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ತಾ. 26 ರೊಳಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಎರಡು ಭಾವಚಿತ್ರ ಲಗತ್ತಿಸಿರಬೇಕು.
2018ನೇ ಇಸವಿ ಏಪ್ರಿಲ್ 1 ರಿಂದ 2019ನೇ ಇಸವಿ ಮಾರ್ಚ್ 31 ಕ್ಕೆ ಅನ್ವಯವಾಗುವಂತೆ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ಸದಸ್ಯರು (ವೃತ್ತಿ ನಿರತ ಪತ್ರಕರ್ತರು, ಸಂಪಾದಕರು, ಉಪ ಸಂಪಾದಕರು, ಛಾಯಾಚಿತ್ರ ಕಾರರು, ಮಾಧ್ಯಮ ಪ್ರತಿನಿಧಿಗಳು) ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಸಹ ಸದಸ್ಯತ್ವ ನವೀಕರಣ ಮಾಡುವವರು ರೂ. 500 ಹಾಗೂ ಹೊಸದಾಗಿ ಸದಸ್ಯತ್ವಕ್ಕೆ ಅರ್ಜಿ ಹಾಕುವವರು ರೂ. 600 ಶುಲ್ಕ ಪಾವತಿಸಬೇಕು. ವಾರ್ತಾಧಿಕಾರಿ, ಸಹಾಯಕ ವಾರ್ತಾಧಿಕಾರಿ, ಪತ್ರಿಕಾ ಕಲಾವಿದರು, ಕಚೇರಿ ವ್ಯವಸ್ಥಾಪಕರು, ಜಾಹೀರಾತು ವ್ಯವಸ್ಥಾಪಕರು, ಪ್ರಸರಣಾ ವ್ಯವಸ್ಥಾಪಕರು, ಮುದ್ರಕರು, ಪ್ರಕಾಶಕರು, ಕರಡು ತಿದ್ದುಪಡಿಗಾರರು, ಪತ್ರಕರ್ತರ ಸಂಘದ ಸಲಹೆಗಾರರು, ಅರೆ ಸರ್ಕಾರಿ, ಸರ್ಕಾರಿ ನೌಕರರಿಗೆ ಸಹ ಸದಸ್ಯತ್ವ ನೀಡಲಾಗುತ್ತದೆ.
ಮೂರು ವರ್ಷ ಸಾಮಾನ್ಯ ಸದಸ್ಯರಾಗಿರುವವರು ರೂ. 3 ಸಾವಿರ ಪಾವತಿಸಿ ಆಜೀವ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು. ಆಜೀವ ಸದಸ್ಯರಾಗಿರುವವರು ಗುರುತಿನ ಚೀಟಿಗೆ ರೂ. 100 ಪಾವತಿಸಬೇಕು. ಆಜೀವ ಸದಸ್ಯರು ಮತ್ತು ಸಾಮಾನ್ಯ ಸದಸ್ಯ ರಾಗುವವರು ಸದಸ್ಯತ್ವ ಅರ್ಜಿಗೆ ತಾವು ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮದ ಸಂಪಾದಕರು/ ಜಿಲ್ಲಾ ವರದಿಗಾರರ ಸಹಿ ಪಡೆದಿರಬೇಕು.
ಸ್ಥಳೀಯ, ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ 21, ಪ್ರಾದೇಶಿಕ ಪತ್ರಿಕೆಗೆ 10, ವಾರ ಪತ್ರಿಕೆಗೆ 5, ಸ್ಥಳೀಯ ದೃಶ್ಯವಾಹಿನಿಗೆ 7, ರಾಜ್ಯಮಟ್ಟದ ದೃಶ್ಯವಾಹಿನಿಯ ಇಬ್ಬರಿಗೆ ಸದಸ್ಯತ್ವ ನೀಡಲಾಗುತ್ತದೆ.