ಚೆಟ್ಟಳ್ಳಿ, ಮಾ. 6: ಚೆಟ್ಟಳ್ಳಿಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅನಾಮದೇಯ ವ್ಯಕ್ತಿಗಳು ರಾತ್ರಿಯಲ್ಲಿ ಕಿಟಕಿ ಬಾಗಿಲನ್ನು ತಟ್ಟುವದು, ಕಲ್ಲನ್ನು ಬಿಸಾಡಿ ಕುಚೇಷ್ಠೆ ಮಾಡುವ ಮೂಲಕ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಗಳಿಗೆ ತಲೆ ನೋವಾಗಿದೆ.
ಚೆಟ್ಟಳ್ಳಿ ಪ್ರೌಢಶಾಲೆಯ ಜಾಗದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ 1992 ರಿಂದ ನಡೆಯುತ್ತಿದೆ. ಅಂದು ಸುಮಾರು 50 ವಿದ್ಯಾರ್ಥಿಗಳಿದ್ದದು ಪ್ರಸ್ತುತ 20 ವಿದ್ಯಾರ್ಥಿಗಳಿಗೆ ತಲಪಿದೆ. ಸರಕಾರದಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಹಲವು ಸೌಲತ್ತುಗಳನ್ನು ನೀಡಲಾಗಿದ್ದು ಬಯೋಮೆಟ್ರಿಕ್ ವ್ಯವಸ್ಥೆ ಇದೆ.
ಕಳೆದ 15 ದಿವಸಗಳಿಂದ ಮಂಕಿ ಕೇಪ್ ಹಾಕಿದ ಅನಾಮಿಕ ವ್ಯಕ್ತಿಯೊಬ್ಬ ರಾತ್ರಿ ಸುಮಾರು 9.30 ರಿಂದ 10.30ರ ಒಳಗೆ ಮಕ್ಕಳಿರುವ ರೂಮಿನ ಹೊರ ಕಿಟಕಿಯಲ್ಲಿ ತಟ್ಟುವದು, ಸಂಖ್ಯೆಯನ್ನು ಬರೆಯುತ್ತಿದ್ದಾನೆ. ಇದರಿಂದ ವಿದ್ಯಾರ್ಥಿಗಳು ಮೇಲ್ವಿಚಾರಕ ಚಂದ್ರರವರಿಗೆ ವಿಷಯ ತಿಳಿಸಿದ್ದಾರೆ. ಸಿಬ್ಬಂದಿಗಳು, ಮಕ್ಕಳು ವಿದ್ಯಾರ್ಥಿ ನಿಲಯ ಸುತ್ತಲು ಹುಡುಕಾಡಿದಾಗ ಅನಾಮಧೇಯ ವ್ಯಕ್ತಿ ಓಡಿ ಹೋದ ಬಗ್ಗೆ ಹೇಳುತ್ತಾರೆ. ಕೆಲ ದಿನಗಳ ಹಿಂದೆ ಮುಸುಕುದಾರಿಯಾದ ವ್ಯಕ್ತಿ ಓಡಿ ಹೋಗಿ ಪಕ್ಕದ ತೋಟದೊಳಗೆ ಮರೆಯಾಗುತ್ತಿರುವ ಬಗ್ಗೆ ಹಾಗೂ ಎರಡು ಮೂರು ವ್ಯಕ್ತಿಗಳು ಇಂತಹ ಕೃತ್ಯ ಮಾಡುತ್ತಿರುವ ಬಗ್ಗೆ ಅಡಿಗೆಯವರಾದ ಮಲ್ಲಿಕಾರ್ಜುನ್ ಹಾಗೂ ವಿದ್ಯಾರ್ಥಿಗಳು ಹೇಳುತ್ತಾರೆ.
21.2.2018 ರಂದು ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಚಂದ್ರ ಚೆಟ್ಟಳ್ಳಿಯ ಉಪ ಪೊಲೀಸ್ ಠಾಣೆಯಲ್ಲಿ ಈ ತೊಂದರೆಯ ಬಗ್ಗೆ ವಿದ್ಯಾರ್ಥಿಗಳ ಸಹಿ ಮಾಡಿ ದೂರು ಸಲ್ಲಿಸಿದ್ದು ಪೊಲೀಸರು ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿ ಪರಿಶೀಲನೆ ನಡೆಸಿದ್ದಾರೆ. ಆದರೂ ನಿಲಯದ ಕಿಟಕಿಯನ್ನು ತಟ್ಟಿ ತೊಂದರೆ ನೀಡುತಿದ್ದು. ತಲೆ ನೋವಾಗಿದೆ. ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಗಳು ರಾತ್ರಿ ಇಡೀ ಆ ಅನಾಮಧೇಯ ವ್ಯಕ್ತಿಯನ್ನು ಹಿಡಿಯಲು ಕಾವಲು ಕಾಯುವ ಪರಿಸ್ಥಿತಿ ಒಂದೆಡೆಯಾದರೆ ಮಕ್ಕಳಿಗೂ ತೊಂದರೆಯಾಗುತ್ತಿದೆ. ನಿತ್ಯವೂ ಮಕ್ಕಳಿಗೆ ವಿಶೇಷ ಬೋಧಿಸಲು ಇಲಾಖೆಯಿಂದ ನೇಮಿಸಿರುವ ಶಿಕ್ಷಕರಲ್ಲೂ ಹೊಂದಾಣಿಕೆ ಇಲ್ಲದಿರುವದು ಹಾಗೂ ಆ ಶಿಕ್ಷಕರೇ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳನ್ನು ಬಿನ್ನಬೇಧ ನಡೆಸುತ್ತಿರುವದು ಎದ್ದು ಕಾಣುತ್ತಿದೆ.
- ಪುತ್ತರಿರಕರುಣ್ ಕಾಳಯ್ಯ