ಮಡಿಕೇರಿ, ಮಾ.6 : ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕಟ್ಟೆಮಾಡು ಗ್ರಾಮದ ಎರಡು ಪ್ರದೇಶಗಳಲ್ಲಿ ಮರಳು ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದ್ದು, ಇದು ಅವೈಜ್ಞಾನಿಕ ವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಗುತ್ತಿಗೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಹಾಗೂ ಇತರರು, ಗ್ರಾಮ ಪಂಚಾಯಿತಿಯ ಗಮನಕ್ಕೂ ತರದೆ ಎಸ್.ಕಟ್ಟೆಮಾಡು ಗ್ರಾಮದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲಾಖೆ ಗುರುತಿಸಿರುವ ಪ್ರದೇಶದಲ್ಲಿ ಮರಳು ನಿಕ್ಷೇಪವೇ ಇಲ್ಲ. ಅದರ ಬದಲಾಗಿ ಬೇರೊಂದು ಜಾಗದಲ್ಲಿ ನದಿಯ ಮಧ್ಯಭಾಗದಿಂದ ಮರಳನ್ನು ತೆಗೆಯಬೇಕಾಗಿದ್ದು, ಇದಕ್ಕೆ ದೋಣಿ ಮತ್ತು ಯಂತ್ರಗಳನ್ನು ಬಳಸಬೇಕಾಗಿದೆ. ಮತ್ತೊಂದೆಡೆ ಮರಳು ಗಣಿಗಾರಿಕೆ ನಡೆಸುವ ಸ್ಥಳಕ್ಕೆ ಸಮರ್ಪಕವಾದ ರಸ್ತೆ ಸೌಲಭ್ಯವಿರಬೇಕೆಂಬ ನಿಯಮವಿದೆ. ಆದರೆ ಪ್ರಸಕ್ತ ಗುರುತಿಸಲಾಗಿರುವ ಸ್ಥಳಕ್ಕೆ ಸೂಕ್ತ ರಸ್ತೆಯೇ ಇಲ್ಲ. ಈಗಿರುವ ರಸ್ತೆ ಅತ್ಯಂತ ಕಿರಿದಾಗಿದ್ದು, ಇದರಲ್ಲಿ ಗ್ರಾಮಸ್ಥರ ವಾಹನಗಳು ಓಡಾಡುವದೇ ಕಷ್ಟಸಾಧ್ಯವಾಗಿದೆ. ಈ ಸಂಬಂಧವಾಗಿ ಆ ಭಾಗದ ನಿವಾಸಿಗಳು ಮರಳು ಸಾಗಿಸಲು ಆಕ್ಷೇಪ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದು, ಪಂಚಾಯಿತಿಯ ಸಾಮಾನ್ಯ ಸಭೆಯಲ್ಲೂ ಈ ಸ್ಥಳಗಳಲ್ಲಿ ಮರಳು ಗಣಿಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿ ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ವಿವರಿಸಿದರು.

ಮರಳು ನಿಕ್ಷೇಪ ಇರುವ ಜಾಗವು ಹಚ್ಚಿನಾಡು ಗ್ರಾಮದ ವ್ಯಾಪ್ತಿಗೆ ಸೇರಿದ್ದು, ಆ ಗ್ರಾಮದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡುವ ಬದಲು ಕಟ್ಟೆಮಾಡು ಗ್ರಾಮದ ಸರ್ವೆ ನಂಬರ್‍ಗಳನ್ನು ನಮೂದಿಸಿ ಟೆಂಡರ್ ನಡೆಸಲಾಗಿದೆ. ಆದರೆ ಇಲಾಖೆ ಗುರುತಿಸಿರುವ ಸರ್ವೆ ನಂಬರ್‍ಗಳಲ್ಲಿ ಮರಳು ನಿಕ್ಷೇಪಗಳೇ ಇಲ್ಲ. ನದಿ ದಂಡೆಯಿಂದ ಹಲವು ಮೀಟರ್ ದೂರದಲ್ಲಿ ನದಿ ಮಧ್ಯದಲ್ಲಿ ಸುಮಾರು 20-30 ಅಡಿ ಆಳದಲ್ಲಿ ಮರಳು ಇದ್ದು, ಇದನ್ನು ತೆಗೆಯಬೇಕಾದರೆ ಯಂತ್ರಗಳನ್ನು ಬಳಸಬೇಕಿದೆ. ಅಲ್ಲದೆ ಅಲ್ಲಿಂದ ಅದನ್ನು ದಡಕ್ಕೆ ಸಾಗಿಸಲು ದೋಣಿಗಳನ್ನು ಬಳಸಬೇಕಾಗಿದೆ. ಇವುಗಳನ್ನು ಬಳಸುವದರಿಂದ ನದಿ ದಂಡೆಗೆ ಅಪಾಯವಾಗುವ ಸಾಧ್ಯತೆಯಿದ್ದು, ನದಿ ದಂಡೆಯಲ್ಲಿ ನೆಲೆಸಿರುವ ಸುಮಾರು 150ರಿಂದ 200 ಕುಟುಂಬಗಳು ನದಿ ಪಾಲಾಗುವ ಅಪಾಯವಿದೆ ಎಂದು ನುಡಿದರು.

ಇಕ್ಕಟ್ಟಾದ ರಸ್ತೆಯಲ್ಲಿ ಮರಳು ತುಂಬಿದ ಲಾರಿಗಳು ಸಂಚರಿಸುವ ದರಿಂದ ಇತರ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಯಾವದೇ ಸರಕಾರಿ ಅನುದಾನವಿಲ್ಲದೆ ಈಗಾಗಲೇ ದುಸ್ಥಿತಿಯಲ್ಲಿರುವ ರಸ್ತೆ ಮತ್ತಷ್ಟು ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಪಂಚಾಯಿತಿ ವತಿಯಿಂದ ಪತ್ರ ಬರೆಯಲಾಗಿದ್ದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಹವಾಲು ಮಂಡಿಸಲಾಗುವದು ಎಂದÀರು. ಈ ಭಾಗದಲ್ಲಿ ಮರಳು ಗಣಿಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕೆಲವು ವ್ಯಕ್ತಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಸೇರಿದಂತೆ ಅಲ್ಲಿನ ಕೆಲವು ಗ್ರಾಮಸ್ಥರು ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವದಾಗಿ ವಿನಾಕಾರಣ ನಮ್ಮ ಮೇಲೆ ಆರೋಪ ಮಾಡಿದ್ದು, ಸಂಬಂಧಿಸಿ ದವರು ಇದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಗುತ್ತಿಗೆ ನೀಡಿದ್ದು, ಈ ಸಂಬಂಧವಾಗಿ ಪಂಚಾಯಿತಿಯಿಂದ ನಿರಾಪೇಕ್ಷ ಪಣಾ ಪತ್ರವನ್ನೂ ಪಡೆದಿಲ್ಲ. ಅಲ್ಲದೆ ಟೆಂಡರ್ ನಡೆಸುವ ಮುನ್ನ ಪಂಚಾಯಿತಿ ಗಮನಕ್ಕೂ ತಂದಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪಂಚಾಯತಿ ಸದಸ್ಯರಾದ ಕಳ್ಳೀರ ಹರೀಶ್, ಮುಂಡೋಡಿ ನಾಣಯ್ಯ, ಗ್ರಾಮಸ್ಥರಾದ ಪೋತಂಡ್ರ ತೇಜಪ್ರಸಾದ್, ಸಾದೇರ ಮಧು ಹಾಗೂ ಜೀವನ್ ಹಾಜರಿದ್ದರು.