ಸೋಮವಾರಪೇಟೆ,ಮಾ.5: ಅರಣ್ಯಗಳಲ್ಲಿ ಇತ್ತೀಚೆಗೆ ಉಂಟಾಗುತ್ತಿರುವ ಕಾಡ್ಗಿಚ್ಚಿನಿಂದ ವನ್ಯಜೀವಿಗಳು ಜೀವ ಉಳಿಸಿಕೊಳ್ಳಲು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಕಾಡಾನೆಗಳಂತೂ ಆಹಾರಕ್ಕಾಗಿ ಕಾಫಿ, ಬಾಳೆ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ.

ನಿಡ್ತ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರ, ಹಿರಿಕರ ಗ್ರಾಮಗಳಲ್ಲಿ ಹಾಡಹಗಲೇ ಕಾಡಾನೆ ಸಂಚರಿಸುತ್ತಿವೆ.

ನಿನ್ನೆ ಸಂಜೆ ಹಿರಿಕರ ಗ್ರಾಮದಲ್ಲಿ ಕಂಡುಬಂದ ಕಾಡಾನೆ, ಅಲ್ಲಿನ ಹೆಚ್.ಪಿ. ಸುರೇಶ್ ಎಂಬವರಿಗೆ ಸೇರಿದ ತೋಟಕ್ಕೆ ನುಗ್ಗಿ ಬಾಳೆ ಫಸಲನ್ನು ನಷ್ಟಗೊಳಿಸಿದೆ. ಇದರೊಂದಿಗೆ ಕಾಫಿ ಗಿಡಗಳಿಗೂ ಹಾನಿಪಡಿಸಿದೆ.

ಕಳೆದ ವಾರವಷ್ಟೇ ನಿಡ್ತ ಮೀಸಲು ಅರಣ್ಯದ ಬಾಣಾವರದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಹತ್ತಾರು ಏಕರೆ ಅರಣ್ಯ ಸುಟ್ಟು ಕರಕಲಾಗಿತ್ತು. ಈ ಭಾಗದಲ್ಲಿದ್ದ ಕಾಡಾನೆಗಳು ಗೌಡಳ್ಳಿ, ಮಾಲಂಬಿ, ಹಿತ್ತಲಗದ್ದೆ, ಕಣಗಾಲು ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.