ಕುಶಾಲನಗರ, ಮಾ. 2: ನಿರಾಶ್ರಿತ ಟಿಬೇಟಿಯನ್ನರ ನೂತನ ವರ್ಷಾಚರಣೆಯ 15 ನೇ ದಿನದಂದು ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಆಚರಣೆಗೆ ತೆರೆ ಬಿದ್ದಿದೆ. ಫೆಬ್ರವರಿ 15 ರಿಂದ ಪ್ರಾರಂಭಗೊಂಡ ನೂತನ ವರ್ಷವನ್ನು ಟಿಬೆಟಿಯನ್ನರು ಕುಶಾಲನಗರ ಸಮೀಪದ ಬೈಲುಕೊಪ್ಪೆ ಶಿಬಿರದಲ್ಲಿ ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಿದರು.

ದೇಶವಿದೇಶಗಳಲ್ಲಿ ನೆಲೆಸಿರುವ ಶಿಬಿರದ ನಾಗರಿಕರು ಈ ಸಂದರ್ಭ ತಮ್ಮ ತಮ್ಮ ಮನೆಗಳಲ್ಲಿ ನೂತನ ವರ್ಷ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೂತನ ವರ್ಷ ಆಚರಣೆಯ 15ನೇ ದಿನ ಅಂದರೆ ಹುಣ್ಣಿಮೆಯಂದು ಬುದ್ದ ಅಮಿತಾಯುಷ್ ಅವರ ಬೃಹತ್ ಚಿತ್ರಪಟ ಅನಾವರಣಗೊಳಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೌದ್ದ ಅನುಯಾಯಿಗಳು ಪುನೀತರಾದರು.

ಚಿತ್ರಪಟ ವೀಕ್ಷಣೆಯಿಂದ ಹೆಚ್ಚಿನ ಆಯುಷ್ಯ ಕಲ್ಪಿಸುತ್ತಾನೆ ಎಂದು ಟಿಬೆಟಿಯನ್ನರ ನಂಬಿಕೆಯಾಗಿದ್ದು ಈ ಅಮಿತಾಯುಷ್ಯ ಚಿತ್ರ ಪರದೆಗೆ ಸಾವಿರಾರು ಸಂಖ್ಯೆಯಲ್ಲಿ ಟಿಬೆಟಿಯನ್ನರು ನಮಿಸಿದರು.