ಶ್ರೀಮಂಗಲ, ಮಾ. 2: ಶ್ರೀಮಂಗಲ ಸಮೀಪ ಟಿ. ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಕೊಟ್ಟಿಗೆಯ ಮೇಲೆ ಹುಲಿ ಧಾಳಿ ನಡೆಸಿ ಹಾಲು ಕರೆಯುವ ಮಿಶ್ರ ತಳಿಯ ಹಸುವನ್ನು ಕೊಂದು ಹಾಕಿರುವ ಭಯಾನಕ ಘಟನೆ ನಡೆದಿದೆ.

ಗ್ರಾಮದ ರೈತ ಚೆÀಟ್ಟಂಗಡ ಶÀಶಿ ಅವರಿಗೆ ಸೇರಿದ ಹಸುವಾಗಿದೆ. ಶುಕ್ರವಾರ ಮುಂಜಾನೆ ಸುಮಾರು 4.45ರ ಸಮಯದಲ್ಲಿ ರೈತ ಶಶಿಯವರ ಮನೆಯಿಂದ ಕೂಗಳತೆ ಹಾಗೂ ಕಣ್ಣಿಗೆ ಕಾಣಿಸುವ ದೂರÀದಲ್ಲಿ ಇರುವ ಕೊಟ್ಟಿಗೆಗೆ ಹುಲಿ ಧಾಳಿ ನಡೆಸಿದ ಸಂದರ್ಭ ಧಾಳಿಗೀಡಾದ ಹಸು ಹಾಗೂ ಕೊಟ್ಟಿಗೆಯಲ್ಲಿದ್ದ ಹಸುಗಳು ಆತಂಕದಿಂದ ಕೂಗಾಡುತ್ತಿದ್ದುದ್ದನ್ನು ಗಮನಿಸಿ ಸ್ಥಳಕ್ಕೆ ತೆರಳಿದ ಶಶಿ ಹಾಗೂ ಇತರರು ಜೋರಾಗಿ ಕೂಗಿಕೊಂಡಿದ್ದಾರೆ. ಈ ಸಂದರ್ಭ ಹಸುವನ್ನು ಬಿಟ್ಟು ಸಮೀಪದ ಕಾಫಿ ತೋಟಕ್ಕೆ ಹುಲಿ ಕಾಲು ಕಿತ್ತಿದೆ. ರೈತ ಶಶಿ ಸಕಾಲಕ್ಕೆ ಕೊಟ್ಟಿಗೆಗೆ ಆಗಮಿಸಿದ್ದರಿಂದ ಕೊಟ್ಟಿಗೆಯಲ್ಲಿದ್ದ ಇನ್ನಷ್ಟು ಜಾನುವಾರುಗಳ ಮೇಲೆ ಹುಲಿ ಧಾಳಿ ತಪ್ಪಿದೆ.

ಸ್ಥಳಕ್ಕೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಹಾಗೂ ಸಿಂಬ್ಬಂದಿ ಆಗಮಿಸಿ ಮಹಜರು ನಡೆಸಿದರು. ಈ ಸಂದರ್ಭ ಹಸುವಿಗೆ ಸೂಕ್ತ ಪರಿಹರ ನೀಡುವಂತೆ ಸಂತ್ರಸ್ಥರು ಒತ್ತಾಯಿಸಿದರು.

ಸರ್ಕಾರದ ನಿಯಮದಂತೆ ಹತ್ತು ಸಾವಿರ ಪರಿಹಾರ ನೀಡಲು ಸಾಧ್ಯವಿದೆ. ಆದರೆ, ಬಾಳೆಲೆ, ಕುಮಟೂರುವಿಲ್ಲಿ ನಡೆದ ಹುಲಿ ಧಾಳಿ ಪ್ರಕರಣದಲ್ಲಿ ರೂ. 30 ಸಾವಿರ ನೀಡಲಾಗಿದ್ದು, ಈ ಪ್ರದೇಶವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುತ್ತದೆ. ಈ ವಲಯದಲ್ಲಿ ಹುಲಿ ರಕ್ಷಣ ನಿಧಿಯಿಂದ ಹೆಚ್ಚುವರಿ ಪರಿಹಾರ ನೀಡಲಾಗಿದೆ. ಆದರೆ, ಶ್ರೀಮಂಗಲ ವಲಯವು ಬ್ರಹ್ಮಗಿರಿ ರಕ್ಷಿತಾರಣ್ಯ ವ್ಯಾಪ್ತಿಗೆ ಬರುತ್ತಿದ್ದು ಹೆಚ್ಚುವರಿ ಪರಿಹಾರ ನೀಡಲು ಅವಕಾಶವಿಲ್ಲ. ಆದರೂ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ವಿಶೇಷ ಪ್ರಕರಣದಲ್ಲಿ ಪರಿಗಣಿಸಿ ಹೆಚ್ಚುವರಿ ಪರಿಹಾರ ಒದಗಿಸುವ ಪ್ರಯತ್ನ ಮಾಡುವದದಾಗಿ ಭರವಸೆ ನೀಡಿದರು.

ಹಾಲು ಕರೆಯುವ ಹಸುವನ್ನು ಕಳೆದುಕೊಂಡು ಮನೆಯಲ್ಲಿ ಚಿಕ್ಕಮಕ್ಕಳಿಗೆ ಹಾಲು ಇಲ್ಲದೆ ಆಗಿದೆ. ಒಂದು ಲೀಟರ್ ಹಾಲಿಗಾಗಿ ಹತ್ತು ಕಿ.ಮೀ. ದೂರದಿಂದ ಪೇಟೆಗೆ ಹೋಗಿ ತರಲು 100 ರೂ. ಖರ್ಚಾಗುತ್ತದೆ. ಹಸುವಿನ ಹಾಲು, ಗೊಬ್ಬರ, ಇತ್ಯಾದಿಯನ್ನು ಅವಲಂಭಿಸಿ ಬದುಕುತ್ತಿದ್ದ ಸಾಮಾನ್ಯ ರೈತ ಕುಟುಂಬಕ್ಕೆ ಹಸುವನ್ನು ಕಳೆದುಕೊಂಡು ನಷ್ಟ ಉಂಟಾಗಿದೆ. ಆದ್ದರಿಂದ ಹೆಚ್ಚಿನ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.

ಶ್ರೀಮಂಗಲ ಸಮೀಪ ಇರ್ಪುವಿನಲ್ಲಿರುವ ಲಕ್ಷ್ಮಣ ತೀರ್ಥ ಉಗಮ ಸ್ಥಾನದ ಜಲಧಾರೆಯನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಂದ ಅರಣ್ಯ ಇಲಾಖೆ ಹಣ ಸಂಗ್ರಹಿಸುವ ಮೂಲಕ ಆದಾಯವಿದೆ. ಈ ಆದಾಯವನ್ನು ಇಂತಹ ಪ್ರಕರಣದಲ್ಲಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್‍ಎಫ್‍ಒ ವೀರೇಂದ್ರ ಜಿಲ್ಲೆಯಲ್ಲಿ ಸಿಸಿಎಫ್ ಆಗಿದ್ದ ಮನೋಜ್ ಕುಮಾರ್ ಅವರು ಪ್ರವಾಸಿಗರಿಂದ ಬರುವ ಆದಾಯವನ್ನು ವನ್ಯ ಪ್ರಾಣಿಗಳ ಧಾಳಿಯಿಂದ ಉಂಟಾಗುವ ನಷ್ಟಕ್ಕೆ ಪರಿಹಾರವಾಗಿ ಹೆಚ್ಚುವರಿಯಾಗಿ ಬಳಸಿಕೊಳ್ಳಲು ಪ್ರಸ್ತಾಪಿಸಿದ್ದರು. ಈ ಬಗ್ಗೆ ಇಲಾಖೆಯಲ್ಲಿ ಪ್ರಸ್ತಾವನೆ ಇದೆ, ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದರು.2 ದಿನಗಳ ಕಾಲ ಹುಲಿಯ ಚಲನ-ವಲನದ ಬಗ್ಗೆ ನಿಗಾ ಇಟ್ಟು ಹುಲಿ ಸೆರೆಗೆ ಅಗತ್ಯ ಕ್ರಮಕೈಗೊಳ್ಳಲಾಗುವದೆಂದು ತಿಳಿಸಿದರು.

ಸ್ಥಳಕ್ಕೆ ಶ್ರೀಮಂಗಲ ಪಶು ವೈದ್ಯಾಧಿಕಾರಿ ಬಿ.ಜಿ. ಗಿರೀಶ್ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಕೊಡಗು ವನ್ಯ ಜೀವಿ ವಾರ್ಡನ್ ಕುಂಞಂಗಡ ಬೋಸ್ ಮಾದಪ್ಪ, ಟಿ.ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಞಂಗಡ ಕೃಷ್ಣ ಮತ್ತಿತರರು ಹಾಜರಿದ್ದರು.