ಬೆಂಗಳೂರು, ಮಾ. 3: ತಮ್ಮ 6 ದಶಕಗಳ ಸಾರ್ವತ್ರಿಕ ಬದುಕಿನಲ್ಲಿ ತಾವಿದ್ದ ರಾಜಕೀಯ ಪಕ್ಷವನ್ನು ಮತ್ತು ಸಾರ್ವಜನಿಕ ವೇದಿಕೆಗಳನ್ನು ಜನಸೇವೆಯ ವಾಹನವನ್ನಾಗಿ ಪರಿಗಣಿಸಿದ್ದೇನೆಯೇ ಹೊರತು ಇವುಗಳನ್ನು ಎಂದೂ ಅಧಿಕಾರ ಕ್ಕೇರುವ ಏಣಿಯಾಗಿ ಬಳಸಿಕೊಂಡಿಲ್ಲ. ಇದರಿಂದ ಪಕ್ಷಾಂತರ ಅನಿವಾರ್ಯ ವಾಗಿತ್ತು ಎಂದು ಹಿರಿಯ ಹೋರಾಟ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರು ತಮ್ಮ ಹಿಂದಿನ ನಡೆಗಳನ್ನು ಸಮರ್ಥಿಸಿಕೊಂಡರು.

‘ಎ.ಕೆ. ಸುಬ್ಬಯ್ಯ ಅಭಿನಂದನಾ ಸಮಿತಿ’ ವತಿಯಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ‘ಜ್ಞಾನಜ್ಯೋತಿ’ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ.ಕೆ. ಸುಬ್ಬಯ್ಯ ಅವರು, ತಮ್ಮ ಸುದೀರ್ಘ ಅವಧಿಯ ರಾಜಕಾರಣದಲ್ಲಿ ಆಸೆಯ ಹಿಂದೆ ಬಿದ್ದವನಲ್ಲ. ಆಸೆಯೇ ಇಲ್ಲದ ವ್ಯಕ್ತಿಗೆ ನಿರಾಸೆಯ ಪ್ರಶ್ನೆಯೇ ಉಧ್ಬವಿಸುವದಿಲ್ಲ. ಒಂದು ವೇಳೆ ಜನಹಿತವನ್ನು ಬದಿಗಿರಿಸಿ ಅಧಿಕಾರದ ಹಿಂದೆ ಬಿದ್ದಿದ್ದರೆ ತನಗೆ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶವಿತ್ತು. ಇದು ಸಾಧ್ಯವಿಲ್ಲದಿದ್ದರೆ ಕನಿಷ್ಟ ಉಪ ಮುಖ್ಯಮಂತ್ರಿಯಾದರೂ ಆಗಬಹುದಿತ್ತು ಎಂದು ಮೆಲುಕು ಹಾಕಿದರು.

ನಿರ್ದಿಷ್ಟವಾದ ಗುರಿ ಮುಟ್ಟಲು ವಾಹನವೊಂದರಲ್ಲಿ ಚಲಿಸುವಾಗ ಆ ವಾಹನ ದಾರಿಯಲ್ಲಿ ಕೆಟ್ಟು ನಿಂತರೆ ಉದ್ದೇಶಿತ ಗುರಿ ತಲುಪಲು ಮತ್ತೊಂದು ವಾಹನವನ್ನು ಅವಲಂಬಿಸಬೇಕಾಗುತ್ತದೆ. ಈ ಕೆಲಸವನ್ನಷ್ಟೆ ತಾನು ಮಾಡಿದ್ದು ಎಂದು ವಿವರಿಸಿದ ಸುಬ್ಬಯ್ಯ ಅವರು, ತಾನು ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಿದರೆ ಯಾವದೇ ಪಶ್ಚಾತ್ತಾಪವಿಲ್ಲ.

ಜೀವನದ ಉದ್ದಕ್ಕೂ ಆಯಾ ಸಂದರ್ಭದಲ್ಲಿ ತಾನು ತೆಗೆದುಕೊಂಡ ತೀರ್ಮಾನ ಕಾಲಕ್ಕೆ ಸೂಕ್ತವಾಗಿಯೇ ಇತ್ತು ಎಂದರು. ಜನಸಂಘ ಮತ್ತು ಬಿ.ಜೆ.ಪಿ.ಯಲ್ಲಿ ವ್ಯಯಿಸಿದ ಸುದೀರ್ಘ ಅವಧಿ ವ್ಯರ್ಥವಾಯಿತೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದಾಗ, ಅದರೊಳಗೆ ನುಗ್ಗಿ ಅಲ್ಲಿನ ನಿಜಾರ್ಥ ತಿಳಿದುಕೊಳ್ಳದೆ ಹೋಗಿದ್ದರೆ ಅಲ್ಲಿಂದ ಹೊರಬಂದು ಸಂಘ ಪರಿವಾರದ ವಿರುದ್ಧ ಇಷ್ಟೊಂದು ಪ್ರಬಲವಾಗಿ ಹೋರಾಟ ನಡೆಸಲು ತನಗೆ ಸಾಧ್ಯವಾಗುತ್ತಿರಲಿಲ್ಲ. ಅದರ ಒಳಹೋಗಿದ್ದರಿಂದಲೇ ಅಲ್ಲಿನ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇದು ಒಳ್ಳೆದೇ ಆಯಿತು ಎಂಬ ಭಾವನೆ ತನ್ನಲ್ಲಿದೆ ಎಂದು ಅನಿಸಿಕೆ ಹಂಚಿಕೊಂಡರು.

ಇಂದಿನ ಕಾರ್ಯಕ್ರಮ ಕೇವಲ ಅಭಿನಂದನಾ ಸಮಾರಂಭವಾಗಿ ಉಳಿಯಬಾರದು. ರಾಜ್ಯಾಂಗ ಸಂರಕ್ಷಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಕ್ರಾಂತಿಕಾರಕ ಜನಾಂದೋಲನದ ರೂಪ ತಾಳಲು ಇದು ನಾಂದಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರಲ್ಲದೆ, ಸಮಾಜ ಇಂದಿಗೂ ಸತ್ವಹೀನವಾಗಿಲ್ಲ. ಸಮಾಜ ಬದಲಾವಣೆಯನ್ನು ಬಯಸುತ್ತಿದೆ ಎಂದಾದರೆ ಇದು ಸತ್ವಶಾಲಿಯಾಗಿದೆ ಎಂದೇ ಅರ್ಥ. ಸಮಾಜದಲ್ಲಿ ಎಲ್ಲಾರೂ ಕೆಟ್ಟವರಲ್ಲ. ಅದಕ್ಕಾಗಿ ಪ್ರಜ್ಞಾವಂತರು ಆಶಾವಾದಿಗಳಾಗಿರಬೇಕು ಎಂದು ಕಿವಿಮಾತು ಹೇಳಿದರು.