ಮಡಿಕೇರಿ, ಮಾ. 3: ಕೊಡಗು ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ರೂ. 50 ಕೋಟಿ ಅನುದಾನಕ್ಕೆ ಸರಕಾರ ಮಂಜೂರಾತಿ ನೀಡಿದೆ. ಲೋಕೋಪಯೋಗಿ ಇಲಾಖೆ ಮೂಲಕ ಲೆಕ್ಕ ಶೀರ್ಷಿಕೆಯಡಿ ರೂ. 50 ಕೋಟಿ ಮಂಜೂರಾಗಿದ್ದು, ಷರತ್ತುಗಳನ್ವಯ ಗ್ರಾ.ಪಂ. ಪ್ಯಾಕೇಜ್ ಮಾಡಿ ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಪ್ರಯತ್ನದಿಂದಾಗಿ ಈ ಅನುದಾನ ಮಂಜೂರಾಗಿದ್ದು, ಅನುದಾನ ಬಿಡುಗಡೆಗೆ ಸಹಕರಿಸಿದವರಿಗೆ ಹರೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇದರೊಂದಿಗೆ ವೀರಾಜಪೇಟೆ ಕೊಡವ ಸಮಾಜ ಸಂಸ್ಥೆಯ ಸಮುದಾಯ ಭವನ ನಿರ್ಮಾಣಕ್ಕೆ ರೂ. 25 ಲಕ್ಷ, ಬಸವೇಶ್ವರ ಯುವಕ ಸಂಘ, ವೀರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೆಬೀಡು ಗ್ರಾಮದಲ್ಲಿ ಸಮುದಾಯ ಭವನಕ್ಕೆ ರೂ. 5 ಲಕ್ಷ, ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿರುವ ಕೊಡವ ಸಮಾಜಕ್ಕೆ ರೂ. 50 ಲಕ್ಷ, ವೀರಾಜಪೇಟೆ ಕೊಡವ ಸಮಾಜಕ್ಕೆ ರೂ. 20 ಲಕ್ಷ, ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘ, ತೊರೆನೂರುವಿಗೆ ರೂ. 5 ಲಕ್ಷ, ಗರ್ವಾಲೆ ಕೊಡವ ಸಮಾಜದವರಿಗೆ ಸಮುದಾಯ ಭವನಕ್ಕೆ ರೂ. 10 ಲಕ್ಷ, ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪಲು, ಕೊಕೇರಿ ಗ್ರಾಮದಲ್ಲಿ ಕೊಡವ ಸಮಾಜಕ್ಕೆ ರೂ. 20 ಲಕ್ಷ, ಮಡಿಕೇರಿ ಕೊಡಗು ಗೌಡ ಸಮಾಜದ ಸಮುದಾಯ ಭವನಕ್ಕೆ ರೂ. 75 ಲಕ್ಷ, ಶ್ರೀ ನಾರಾಯಣ ಗುರು ಮಂದಿರ ಕಂಬಿಬಾಣೆ ಗ್ರಾಮ, ಅತ್ತೂರು ನಲ್ಲೂರುವಿಗೆ ರೂ. 25 ಲಕ್ಷ ಸೇರಿದಂತೆ ಒಟ್ಟು ರೂ. 2.35 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಹರೀಶ್ ಬೋಪಣ್ಣ ಮಾಹಿತಿ ನೀಡಿದ್ದಾರೆ.