*ಸಿದ್ದಾಪುರ, ಮಾ. 3: ಮರಳು ನಿಕ್ಷೇಪ ಇಲ್ಲದ ಹಾಗೂ ಸಾಗಾಣಿಕೆಗೆ ಸೂಕ್ತ ರಸ್ತೆ ಸಂಪರ್ಕವೂ ಇಲ್ಲದ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮರಗೋಡು ಗ್ರಾಮ ಪಂಚಾಯಿತಿಗೆ ನೀಡಿರುವ ಆದೇಶವನ್ನು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ತಿರಸ್ಕರಿಸಿ ನಿರ್ಣಯ ಕೈಗೊಂಡಿದೆ.

ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಮರಳುಗಾರಿಕೆಗೆ ಸಂಬಂಧಿಸಿದಂತೆ ಆಯ್ಕೆಗೊಂಡಿರುವ ಗುತ್ತಿಗೆದಾರರು ಪಾಲಿಸಬೇಕಾದ ನಿಯಮಗಳ ಆದೇಶದ ಪ್ರತಿಯನ್ನು ಗ್ರಾಮ ಪಂಚಾಯಿತಿಗೆ ಕಳುಹಿಸಲಾಗಿತ್ತು.

ಗ್ರಾಮ ಪಂಚಾಯಿತಿಯ ಅರಿವಿಗೆ ಬಾರದೆ ಮರಳು ನಿಕ್ಷೇಪದ ಪ್ರದೇಶಗಳನ್ನು ಗುರುತಿಸಲಾಗಿದೆ, ಟೆಂಡರ್ ಪ್ರಕ್ರಿಯೆಯೂ ಕೂಡ ಪಾರದರ್ಶಕವಾಗಿ ನಡೆದಿರುವದಿಲ್ಲ ಎಂದು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಆರೋಪಿಸಿದ್ದಾರೆ. ಮರಳು ಯತೇಚ್ಛವಾಗಿ ಶೇಖರಣೆಗೊಂಡಿರುವ ಪ್ರದೇಶವನ್ನು ಗುರುತಿಸದೇ ಕೆಲವು ವ್ಯಕ್ತಿಗಳ ಅನುಕೂಲಕ್ಕಾಗಿ ಗೌಪ್ಯವಾಗಿ ಮರಳು ಲಭಿಸುವ ಸ್ಥಳ ಗುರುತಿಸಲಾಗಿರುವದು ಗ್ರಾಮಸ್ಥರ ಆಕ್ಷೇಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಗ್ರಾಮಸ್ಥರಾದ ಸಾದೇರ ಮಧು, ತೇಜ ಪ್ರಸಾದ್ ಹಾಗೂ ಬಿದ್ರುಪಣೆ ದರ್ಶನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಮರಳುಗಾರಿಕೆಗೆ ಈಗಾಗಲೇ ಗುರುತಿಸಲಾಗಿರುವ ಪ್ರದೇಶದಲ್ಲಿ ಅವಕಾಶ ನೀಡುವದಿಲ್ಲ ಎಂದು ಎಚ್ಚರಿಸಿದ್ದಾರೆ. ಸೂಕ್ತ ಪ್ರದೇಶವನ್ನು ವೈಜ್ಞಾನಿಕವಾಗಿ ಗುರುತಿಸುವಂತೆ ಒತ್ತಾಯಿಸಲಾಗಿದೆ. ಮರಳುಗಾರಿಕೆಗೆ ಸೂಕ್ತ ಪ್ರದೇಶವನ್ನು ಪುನರ್‍ಪರಿಶೀಲಿಸಿ ಸ್ಥಳ ಗುರುತಿಸುವಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗೆ, ಸದಸ್ಯರಾದ ಕಟ್ಟೆಮನೆ ಧನಂಜಯ, ಕಳ್ಳೀರ ಸುರೇಶ್, ಮುಂಡೋಡಿ ನಂದಾ ನಾಣ್ಣಯ್ಯ ಒತ್ತಾಯಿಸಿದ್ದಾರೆ. - ಅಂಚೆಮನೆ ಸುಧಿ