ಕುಶಾಲನಗರ, ಮಾ. 3: ಕುಶಾಲನಗರ ಪಟ್ಟಣ ಪಂಚಾಯಿತಿ 2018-19ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ರೂ. 6.85 ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ನಿರೀಕ್ಷಿತ ಆದಾಯ ವಿವರ ಹಾಗೂ ಅಂದಾಜು ಖರ್ಚು ವೆಚ್ಚದ ಆಯವ್ಯಯದ ವಿವರ ಒದಗಿಸಿದರು.

2018-19ನೇ ಸಾಲಿನ ನಿರೀಕ್ಷಿತ ಆದಾಯ ರೂ. 7.85 ಕೋಟಿಗಳಾಗಿದ್ದು ನಿರೀಕ್ಷಿತ ಖರ್ಚು ರೂ. 7.79 ಕೋಟಿಗಳಾಗಿವೆ ಎಂದು ಮಾಹಿತಿ ಒದಗಿಸಿದರು. ಬಜೆಟ್ ಮಂಡಿಸಿದ ರೇಣುಕಾ, ಕುಶಾಲನಗರ ಪಟ್ಟಣಕ್ಕೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಸ್ತೆ, ನೀರು, ಚರಂಡಿ, ಸ್ವಚ್ಛತೆ, ಬೀದಿ ದೀಪ ಮುಂತಾದ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ರೂಪಿಸುವದಾಗಿ ತಿಳಿಸಿದ್ದು, ಈ ನಿಟ್ಟಿನಲ್ಲಿ 2018-19ನೇ ಸಾಲಿಗೆ ಕುಶಾಲನಗರ ಪಟ್ಟಣದಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಆದಾಯ ಮೂಲಗಳನ್ನು ಸಂಗ್ರಹಿಸುವದರೊಂದಿಗೆ ಅನುದಾನ ಪಡೆದು ಕುಶಾಲನಗರ ಪಟ್ಟಣದಲ್ಲಿ ಪಂಚಾಯಿತಿ ನೂತನ ಕಟ್ಟಡ, ವಾಣಿಜ್ಯ ಮಳಿಗೆಗಳ ನಿರ್ಮಾಣ ಸೇರಿದಂತೆ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವದು ಎಂದಿದ್ದಾರೆ. ಕುಶಾಲನಗರ ಪಟ್ಟಣದಲ್ಲಿ ಪಾದಚಾರಿಗಳಿಗೆ ಸ್ಕೈವಾಕರ್ ನಿರ್ಮಾಣಕ್ಕೆ ರೂ. 20 ಲಕ್ಷ, ಈಜುಕೊಳ ನಿರ್ಮಾಣಕ್ಕೆ ರೂ. 20 ಲಕ್ಷ ಹಾಗೂ ನೈರ್ಮಲ್ಯ, ಘನತ್ಯಾಜ್ಯ ವಸ್ತು ನಿರ್ವಹಣೆಯ ವಾಹನ ಖರೀದಿ ಯಂತ್ರೋಪಕರಣ ವಿಶೇಷವಾಗಿ ಮಹಿಳೆಯರ ಅನುಕೂಲಕ್ಕಾಗಿ ನ್ಯಾಪ್ಕಿನ್ ಬರ್ನಿಂಗ್ ಯಂತ್ರ ಖರೀದಿಗೆ ರೂ. 26 ಲಕ್ಷ, ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ವ್ಯವಸ್ಥೆಗೆ ರೂ. 3 ಲಕ್ಷ, ಕಾವೇರಿ ನದಿ ಸ್ವಚ್ಛತೆ ಮಾಡುವ ನಿಟ್ಟಿನಲ್ಲಿ ರೂ. 10 ಲಕ್ಷ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ. ಎಸ್‍ಎಫ್‍ಸಿ ಅನುದಾನ, 14ನೇ ಹಣಕಾಸು ಅನುದಾನ, ಆಸ್ತಿ ತೆರಿಗೆ, ಸೇರಿದಂತೆ ಹಲವು ನಿರೀಕ್ಷಿತ ಆದಾಯಗಳಿಂದ ಒಟ್ಟು ರೂ. 7 ಕೋಟಿ 85 ಲಕ್ಷ ಸಂಗ್ರಹವಾಗಲಿದ್ದು, ನೌಕರರ ವೇತನಕ್ಕೆ ರೂ. 98 ಲಕ್ಷ, ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ರೂ. 23 ಲಕ್ಷ, ನಗರ ಸ್ವಚ್ಛತೆಗೆ ರೂ. 53 ಲಕ್ಷ, ಕಚೇರಿಯ ರೆಕಾರ್ಡ್ ರೂಂ ಆಧುನೀಕರಣಕ್ಕೆ ರೂ. 3 ಲಕ್ಷ, ಪಟ್ಟಣದ ಬಡಜನತೆ ಮತ್ತು ಎಸ್‍ಸಿ ಎಸ್‍ಟಿ ಜನಾಂಗದ ಸಹಾಯಧನಕ್ಕೆ ರೂ. 9 ಲಕ್ಷ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕಾಗಿ ರೂ. 4 ಲಕ್ಷ, ಪಟ್ಟಣದ ನೀರು ಸರಬರಾಜು ವ್ಯವಸ್ಥೆಗೆ ರೂ. 20 ಲಕ್ಷ ಸೇರಿದಂತೆ ಒಟ್ಟು ರೂ. 7 ಕೋಟಿ 79 ಲಕ್ಷಗಳ ನಿರೀಕ್ಷಿತ ಖರ್ಚು ಅಂದಾಜಿಸಲಾಗಿದೆ ಎಂದು ಅಧ್ಯಕ್ಷೆ ತಿಳಿಸಿದ್ದಾರೆ.

ಬಜೆಟ್‍ನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ರೂ. 1 ಕೋಟಿ 50 ಲಕ್ಷ ನೀಡಲಾಗಿದೆ ಎಂದು ಉಪಾಧ್ಯಕ್ಷ ಶರವಣ ಕುಮಾರ್ ಮಾಹಿತಿ ನೀಡಿದರು. ಬಜೆಟ್ ಸಭೆಯಲ್ಲಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹೆಚ್.ಕೆ. ಪಾರ್ವತಿ, ಹೆಚ್.ಡಿ. ಚಂದ್ರ ಹಾಗೂ ಸದಸ್ಯರು ಉಪಸ್ಥಿತರಿದ್ದರು.