ಕುಶಾಲನಗರ, ಮಾ. 3: ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ವೈಫಲ್ಯದ ವಿರುದ್ಧ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಮಂಗಳೂರು ಚಲೋ’ ಜನ ಸುರಕ್ಷಾ ಯಾತ್ರೆಯು ಬೆಳಿಗ್ಗೆ ಕುಶಾಲನಗರದಿಂದ ಪ್ರಾರಂಭಗೊಂಡು ಸಂಜೆ ಮಡಿಕೇರಿಗೆ ತಲಪಿತು. ಯಾತ್ರೆ ಉದ್ದಕ್ಕೂ ಬಿಜೆಪಿ ಪರ; ಕಾಂಗ್ರೆಸ್ ವಿರುದ್ಧ ಘೋಷಣೆಗಳು ಮೊಳಗಿದವು.ಕುಶಾನಗರದಲ್ಲಿ ಸುರಕ್ಷಾ ಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಶಾಂತಿಯುತವಾಗಿದ್ದ ಕರ್ನಾಟಕ ರಾಜ್ಯವನ್ನು ಸಮಾಜಘಾತುಕ ಶಕ್ತಿಗಳ ಕೈಗೆ ನೀಡುವದರೊಂದಿಗೆ ಅಶಾಂತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರದ ಆಡಳಿತದಿಂದ ರೋಸಿಹೋದ ಜನತೆ ದೇಶದ ಇತರ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಮೂಲಕ ಬಹುತೇಕ ರಾಜ್ಯಗಳ ಆಡಳಿತ ತಮ್ಮ ಪಕ್ಷದ ಪಾಲಾಗುತ್ತಿವೆ. ಕರ್ನಾಟಕದಲ್ಲಿ ಬದಲಾವಣೆಯ ಕಾಲ ಸಮೀಪಿಸಿದೆ; ಈ ಯಾತ್ರೆ ಮೂಲಕ ಕೇಂದ್ರ ಸರಕಾರದ ಯೋಜನೆಗಳು ಹಾಗೂ ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ರಾಜ್ಯದ ಜನತೆಗೆ ಮಾಹಿತಿ ಒದಗಿಸಲಾಗುವದು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಿದ್ಧರಾಮಯ್ಯ ಸರಕಾರ ರಾಜ್ಯದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದು ಕೇವಲ ಒಂದು ಕೋಮಿನ ಜನರನ್ನು ಓಲೈಸುವ ತಂತ್ರ ಮಾಡುತ್ತಿರುವದು ವಿಷಾದನೀಯ ಎಂದರು. ಹಂತಕರಿಗೆ ಬೆಂಗಾವಲಾಗಿರುವ ಸರಕಾರದಿಂದ ಹಿಂದೂ ಸಮುದಾಯದ ಜನರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಗೆ ಕೊರತೆ ಸೃಷ್ಟಿಯಾಗಿದೆ ಎಂದರು.
ಸಂಸದ ಪ್ರತಾಪ್‍ಸಿಂಹ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ
(ಮೊದಲ ಪುಟದಿಂದ) ಅಧಿಕಾರಕ್ಕೆ ಬಂದ ಬಳಿಕ ಸಮಾಜಘಾತುಕ ಶಕ್ತಿಗಳಾದ ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳ ಕಾರ್ಯಕರ್ತರ ಮೇಲಿನ 175 ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯುವ ಮೂಲಕ ಅರಾಜಕತೆಗೆ ನಾಂದಿ ಹಾಡಿದೆ.
ವ್ಯಾಪಾರದ ಸೋಗಿನಲ್ಲಿ ನೆರೆ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರ ಕೈಗೆ ಸಿಲುಕಿ ಜಿಲ್ಲೆಯ ಜನತೆ ನಲುಗುವಂತಾಗಿದೆ ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳದಿದ್ದಲ್ಲಿ ಕೊಡಗು ಜಿಲ್ಲೆಯ ಭವಿಷ್ಯಕ್ಕೆ ಕುತ್ತು ಉಂಟಾಗಲಿದೆ ಎಂದರು.
ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಈ ಸಾಲಿನ ಆಡಳಿತಾವಧಿಯಲ್ಲಿ ರಾಜ್ಯದ ಎಲ್ಲೆಡೆ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಅಧಿಕಾರಿಗಳು ಸರಣಿ ಆತ್ಮಹತ್ಯೆ ಮಾಡಿಕೊಂಡಿರುವದು ರಾಜ್ಯದ ದುರಂತ ಎಂದರು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಪ್ರಾಸ್ತಾವಿಕ ನುಡಿಗಳಾಡಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ್ ಪ್ರಾರ್ಥಿಸಿ, ಬಿಜೆಪಿ ಉಪಾಧ್ಯಕ್ಷ ಗಣಿಪ್ರಸಾದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ನಿರೂಪಿಸಿದರು. ಜಿ.ಎಲ್. ನಾಗರಾಜ್ ವಂದಿಸಿದರು.
ಮಡಿಕೇರಿಯಲ್ಲಿ ಯಾತ್ರೆ
ಮಡಿಕೇರಿಗೆ ತಲಪಿದ ಜನ ಸುರಕ್ಷಾ ಯಾತ್ರೆಗೆ ಸುದರ್ಶನ ವೃತ್ತದಲ್ಲಿ ಸಂಸದ ನಳಿನ್ ಕುಮಾರ್ ಕಟಿಲ್ ಚಾಲನೆ ನೀಡಿದರು. ನಂತರ ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಬಳಿಕ ಗಾಂಧಿ ಮೈದಾನದಲ್ಲಿ ನಡೆದ ಸಮಾವೇಶವನ್ನು ಪ್ರತಾಪಸಿಂಹ ಉದ್ಘಾಟಿಸಿದರು. ಸಂಸದರುಗಳಾದ ನಳಿನ್ ಕುಮಾರ್ ಕಟಿಲ್ ಹಾಗೂ ಪ್ರತಾಪಸಿಂಹ ಮಾತನಾಡಿ, ರಾಜ್ಯ ಸರ್ಕಾರ ದುರಾಡಳಿತ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಯಾತ್ರೆಯಲ್ಲಿ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಬಿಜೆಪಿ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿಗಳಾದ ರವಿ ಕುಶಾಲಪ್ಪ, ವಿ.ಕೆ. ಲೋಕೇಶ್, ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ಕುಶಾಲನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಕ್ಷೇತ್ರಾಧ್ಯಕ್ಷ ಕೊಮಾರಪ್ಪ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಇದ್ದರು.
ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ನಿರೂಪಿಸಿ, ಬಾಲಚಂದ್ರ ಕಳಗಿ ಸ್ವಾಗತಿಸಿದರು. ಭಾರತಿ ರಮೇಶ್ ಪ್ರಾರ್ಥಿಸಿ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ವಂದಿಸಿದರು.