ಸೋಮವಾರಪೇಟೆ, ಮಾ. 2: ಲೋಕೋಪಯೋಗಿ ಇಲಾಖೆ ಮೂಲಕ ರೂ. 50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಬೆಟ್ಟದಕೊಪ್ಪ-ಹರಗ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ನಂತರ ಅಭಿಯಂತರರೊಂದಿಗೆ ಸ್ಥಳಕ್ಕೆ ತೆರಳಿ ಕಳಪೆ ಗುಣಮಟ್ಟದ ಪರಿಕರಗಳನ್ನು ಕಿತ್ತು ತೆಗೆಸಿದ ಘಟನೆ ಇಂದು ನಡೆಯಿತು.
1.3 ಕಿ.ಮೀ. ದೂರದ ಬೆಟ್ಟದಕೊಪ್ಪ-ಹರಗ ರಸ್ತೆಯನ್ನು ರೂ. 50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಬಳಸಿರುವ ಸಾಮಗ್ರಿಗಳು ಕಳಪೆಯಾಗಿವೆ. ಈ ಬಗ್ಗೆ ಹಲವಷ್ಟು ಬಾರಿ ದೂರು ನೀಡಿದ್ದರೂ ಅಭಿಯಂತರರು ಯಾವದೇ ಕ್ರಮ ಕೈಗೊಂಡಿಲ್ಲ, ಕಳಪೆ ಕಾಮಗಾರಿಗೆ ಮುಕ್ತಿ ನೀಡಬೇಕೆಂದು ಆಗ್ರಹಿಸಿ ಇಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗ, ತಲ್ತರೆಶೆಟ್ಟಳ್ಳಿ, ಬಗ್ಗನಮನೆ ವ್ಯಾಪ್ತಿಯ ಪ್ರಮುಖರು ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 15 ದಿನಗಳ ಹಿಂದೆಯೂ ಪ್ರತಿಭಟನೆ ನಡೆಸಿದ್ದು, ಗುತ್ತಿಗೆದಾರನಿಗೆ ನೀಡಿರುವ ಟೆಂಡರ್ನ್ನು ರದ್ದುಪಡಿಸುವ ಭರವಸೆ ನೀಡಲಾಗಿತ್ತು. ಆದರೆ ಈ ಬಗ್ಗೆ ಯಾವದೇ ಕ್ರಮ ಕೈಗೊಳ್ಳದೆ ಅಭಿಯಂತರರು ಕಳಪೆ ಕೆಲಸ ಮಾಡುವ ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ, ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ಕುಮಾರ್ ಆರೋಪಿಸಿದರು.
ಕಳಪೆ ಕಾಮಗಾರಿಗೆ ಅಭಿಯಂತರರೂ ಕಾರಣವೆಂದು ಆರೋಪಿಸಿ ಧಿಕ್ಕಾರದ ಘೋಷಣೆ ಕೂಗಿದ ಗ್ರಾಮಸ್ಥರು, ಅಭಿಯಂತರ ಪೀಟರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಮಾತನಾಡಿ, ‘ಈಗಾಗಲೇ ಗುತ್ತಿಗೆದಾರ ಉದಯಕುಮಾರ್ ಅವರಿಗೆ 5 ಬಾರಿ ನೋಟೀಸ್ ಕಳುಹಿಸಿದ್ದರೂ ಯಾವದನ್ನೂ ಸ್ವೀಕರಿಸಿಲ್ಲ. ಕೆಲಸ ಸ್ಥಗಿತಗೊಳಿಸುವಂತೆ ಮೌಖಿಕವಾಗಿ ಹೇಳಿದ್ದರೂ ಕಾಮಗಾರಿ ನಿಲ್ಲಿಸಿಲ್ಲ. ಈ ಹಿನ್ನೆಲೆ ಪೊಲೀಸ್ ರಕ್ಷಣೆಯೊಂದಿಗೆ ತಾನೇ ಖುದ್ದು ಸ್ಥಳಕ್ಕೆ ತೆರಳಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ತೆರವುಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು.
ನಂತರ ಸೋಮವಾರಪೇಟೆ ಪೊಲೀಸ್ ಠಾಣೆಗೆ ತೆರಳಿ ಮನವಿ ನೀಡಿದ ಅಭಿಯಂತರರು, ಪೊಲೀಸ್ ಸಿಬ್ಬಂದಿಗಳ ರಕ್ಷಣೆಯೊಂದಿಗೆ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ, ರಸ್ತೆಗೆ ಬಳಸಲಾಗಿದ್ದ ಕಳಪೆ ಗುಣಮಟ್ಟದ ಜಲ್ಲಿ ಸೇರಿದಂತೆ ಇನ್ನಿತರ ಪರಿಕರಗಳನ್ನು ತೆರವು ಮಾಡಿದರು.
ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ, ಚರಂಡಿ, ಮೋರಿ ನಿರ್ಮಾಣ, ಡಾಂಬರು ಕಾಮಗಾರಿ ಕಳಪೆಯಾದರೆ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಲಾಗುವದು ಎಂದು ಸ್ಥಳದಲ್ಲಿದ್ದ ಡಾಲಿ ಪ್ರಕಾಶ್, ಬಗ್ಗನ ಹರೀಶ್, ತ್ರಿಶೂಲ್, ಶರಣ್, ಸಂತೋಷ್, ಯಶ್ವಂತ್, ಮೋಹನ್, ಪ್ರಸಾದ್, ಶರತ್, ಕಿಶನ್ ಸೇರಿದಂತೆ ಇತರರು ಎಚ್ಚರಿಸಿದರು.