ಮಡಿಕೇರಿ, ಮಾ. 3: ಮಂಗಳೂರಿನಿಂದ ಅಕ್ರಮವಾಗಿ ಬೆಂಗಳೂರಿಗೆ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆದಳದವರು ಮರಳು ಸಹಿತ ಎರಡು ಲಾರಿಗಳನ್ನು ವಶಪಡಿಸಿಕೊಂಡು ಐವರನ್ನು ಬಂಧಿಸಿದ್ದಾರೆ.
ಮಂಗಳೂರಿನಿಂದ ಕಲ್ಲಿದ್ದಲು ಸಾಗಿಸುವ ನೆಪದಲ್ಲಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಅಪರಾಧ ಪತ್ತೆದಳದ ನಿರೀಕ್ಷಕ ಎಂ. ಮಹೇಶ್ ನೇತೃತ್ವದ ತಂಡ ರೂ. 25 ಲಕ್ಷ ಮೌಲ್ಯದ ಎರಡು ಮರಳು ತುಂಬಿದ ಲಾರಿಗಳು ಹಾಗೂ ಐವರನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ಹೆಚ್ ನಾಗೇಶ್, ಎನ್.ಬಿ. ಚಂದ್ರಶೇಖರ್, ಹೊಳೆನರಸೀಪುರದ ಸುಮಂತ್ಕುಮಾರ್, ತುಮಕೂರಿನ ಆರ್. ರಂಗಸ್ವಾಮಿ, ಹಳ್ಳಿಮೈಸೂರುವಿನ ರವಿ ಅವರುಗಳೇ ಬಂಧಿತರಾದವ ರಾಗಿದ್ದಾರೆ. ಲಾರಿ ಮಾಲೀಕರುಗಳಾದ ಶಂಕರ್ ನಾಯಕ್, ವೇಣುಗೋಪಾಲ್ ಹಾಗೂ ಧರ್ಮ ಅವರುಗಳು ತಲೆಮರೆಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆದಳ ಸಿಬ್ಬಂದಿಗಳಾದ ಬಿ.ಎಚ್. ಯೋಗೇಶ್ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್, ಕೆ.ಆರ್. ವಸಂತ, ಎಂ.ಬಿ. ಸುಮತಿ, ಯು.ಎ. ಮಹೇಶ್, ಸಿ.ಕೆ. ರಾಜೇಶ್, ಎಂ.ಎ. ಗಿರೀಶ್, ಚಾಲಕ ಶಶಿಕುಮಾರ್ ಪಾಲ್ಗೊಂಡಿದ್ದರು.