ಮಡಿಕೇರಿ, ಫೆ. 28: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನ ಬದ್ಧ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸದ್ಯದಲ್ಲಿಯೇ ತಲಕಾವೇರಿಯಿಂದ ಪೊಂಪ್‍ಹಾರ್‍ಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‍ಸಿ ಅಧ್ಯಕ್ಷ ನಾಚಪ್ಪ ತಿಳಿಸಿದ್ದಾರೆ.

ನಮ್ಮ ಬೇಡಿಕೆಯ ಬಗ್ಗೆ ಈಗಾಗಲೇ ಡಾ. ಸುಬ್ರಮಣ್ಯನ್ ಸ್ವಾಮಿಯವರ ಗಮನ ಸೆಳೆಯಲಾಗಿದೆ. ನಮ್ಮ ಕೋರಿಕೆಗೆ ಸ್ಪಂದಿಸಿರುವ ಅವರು ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ನಾಚಪ್ಪ ತಿಳಿಸಿದ್ದಾರೆ. ಮಾತ್ರವಲ್ಲದೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ಶ್ರೀ ರವಿಶಂಕರ್ ಗುರೂಜಿಯವರನ್ನು ಸಿಎನ್‍ಸಿಯಿಂದ ಭೇಟಿ ಮಾಡಿ ಸಿಎನ್‍ಸಿ ಜಾಥಾ ಕುರಿತು ಮನವರಿಕೆ ಮಾಡಿಕೊಡಲಾಗಿದ್ದು, ಅವರಿಂದಲೂ ಬೆಂಬಲದ ಭರವಸೆ ಸಿಕ್ಕಿದೆ ಎಂದು ನಾಚಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.