ಸೋಮವಾರಪೇಟೆ, ಫೆ. 28: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಜೆಗುಂಡಿ ಗ್ರಾಮದ ಅಂಗನವಾಡಿ ಕೇಂದ್ರ ಅಶುಚಿತ್ವದ ತಾಣವಾಗಿದೆ.

ಅಂಗನವಾಡಿ ಕೇಂದ್ರದಲ್ಲಿ 20ಕ್ಕೂ ಅಧಿಕ ಪುಟಾಣಿಗಳಿದ್ದು, ಈ ಕೇಂದ್ರಕ್ಕೆ ಹೊಂದಿಕೊಂಡಂತೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಈ ಶೌಚಾಲಯಕ್ಕೆ ಬಾಗಿಲುಗಳ ಭದ್ರತೆಯಿಲ್ಲದ್ದರಿಂದ ಒಳಗೆ ಅಶುಚಿತ್ವ ತಾಂಡವವಾಡುತ್ತಿದ್ದು, ನಿರ್ವಹಣೆಯ ಕೊರತೆಯಿಂದ ಇಡೀ ಪ್ರದೇಶ ದುರ್ನಾತ ಬೀರುತ್ತಿದೆ.

ಇದರೊಂದಿಗೆ ಸ್ಥಳೀಯ ನಿವಾಸಿಗಳು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತಾಜ್ಯವನ್ನು ಇದೇ ಶೌಚಾಲಯದ ಮುಂದೆ ಎಸೆಯುತ್ತಿದ್ದು, ಕೊಳೆತ ತ್ಯಾಜ್ಯಗಳಿಂದ ಕ್ರಿಮಿ ಕೀಟಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಪರಿವರ್ತನೆಯಾಗಿದೆ.

ಕಳೆದ ಐದಾರು ತಿಂಗಳಿನಿಂದ ಇಲ್ಲಿ ಶೇಖರಣೆಯಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಂಬಂಧಿಸಿದ ಬೇಳೂರು ಗ್ರಾಮ ಪಂಚಾಯಿತಿ ಮುಂದಾಗಿಲ್ಲ. ಈ ಹಿಂದೆ ಗ್ರಾಮಕ್ಕೆ ಆಗಮಿಸುತ್ತಿದ್ದ ಕಸ ಸಂಗ್ರಹಣೆಯ ವಾಹನವೂ ಇದೀಗ ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.