ಶನಿವಾರಸಂತೆ, ಫೆ. 28: ಪಂಚಾಯಿತಿ ಆರೋಗ್ಯ ಸಮಿತಿ ಏನು ಕೆಲಸ ಮಾಡುತ್ತಿದೆ? ಪಟ್ಟಣದ ಹೊಟೇಲ್ಗಳ ಸ್ವಚ್ಛತೆ ಬಗ್ಗೆ ಪರಿಶೀಲಿಸಿರುವಿರಾ? ಇದು ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣ ದಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ನಾಗರಿಕರಾದ ಜಗದೀಶ್ ಹಾಗೂ ಕೆ.ಎಂ. ಅಮೀರ್ ಕೇಳಿದ ಪ್ರಶ್ನೆಗಳು.
ಸಮುದಾಯ ಆರೋಗ್ಯ ಕೇಂದ್ರದ ಬಳಿ ಮುಖ್ಯರಸ್ತೆ ಪಕ್ಕ ತ್ಯಾಜ್ಯ ರಾಶಿಯಾಗಿದ್ದು, ಪಟ್ಟಣ ಪ್ರವೇಶಿಸುವವರನ್ನು ಸ್ವಾಗತಿಸುವಂತಿದೆ. ಬೆಂಕಿ ಹಚ್ಚಿ ಸುಡುವದರಿಂದ ದುರ್ವಾಸನೆ ರಸ್ತೆಯಲ್ಲಿ ಮಾತ್ರವಲ್ಲ ಆರೋಗ್ಯ ಕೇಂದ್ರದ ಒಳಗೂ ಹರಡುತ್ತಿದೆ. ಮೊದಲಿಗೆ ಗ್ರಾಮ ಸ್ವಚ್ಛತೆ ಕಾಪಾಡಬೇಕು ಎಂಬೆಲ್ಲಾ ಆಕ್ಷೇಪದ ನುಡಿಗಳು ಕೇಳಿ ಬಂದವು.
ಕ್ಷೇತ್ರ ಸಮನ್ವಯಾಧಿಕಾರಿ ಮಾಲತಿ ಮಾತನಾಡಿ, ಗ್ರಾಮಸ್ಥರು ಸ್ವತಃ ತಾವೇ ಸ್ವಚ್ಛತೆ ಕಾಪಾಡಿಕೊಂಡಾಗ ತ್ಯಾಜ್ಯ ಸಮಸ್ಯೆ ಇರುವದಿಲ್ಲ. ಜಮಾಬಂದಿ ನಮೂನೆಗಳಲ್ಲಿ ಜಮಾ-ಖರ್ಚಿನ ಬಗ್ಗೆ ನಾಗರಿಕರು ಪ್ರಶ್ನಿಸಲಿಲ್ಲ. ಪ್ರಶ್ನಿಸುವ ಮನೋಭಾವ ಇದ್ದರೇ ಕೆಲಸ ಕಾರ್ಯ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಸುಧಾರಿತ ತಂತ್ರಜ್ಞಾನ ಹಾಗೂ ಪಂಚಾಯಿತಿ ಆಡಳಿತದಲ್ಲಿ ಪಾರದರ್ಶಕತೆ ಇರುವದರಿಂದ ತಕರಾರು ಇರುವದಿಲ್ಲ ಎಂದರು.
ಜಮಾಬಂದಿ ಸಭೆಗೆ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್, ತಾಲೂಕು ಪಂಚಾಯಿತಿ ಸದಸ್ಯ ಅನಂತಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಆರ್. ಹರೀಶ್, ಹೇಮಾವತಿ, ಎಸ್.ಎನ್. ಪಾಂಡು ಅವರ ಗೈರು ಹಾಜರಿ ಅಸಮಾಧಾನಕ್ಕೆ ಕಾರಣವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಮಾತನಾಡಿ, ಕಳೆದ ವರ್ಷ ಪಂಚಾಯಿತಿಗೆ ಆದಾಯ ಜಾಸ್ತಿಯಿದ್ದು ಗ್ರಾಮಾಭಿವೃದ್ಧಿ ಕೆಲಸ ನಡೆದಿದೆ.
ಆಡಳಿತ ಮಂಡಳಿ ಸಹಕಾರದಿಂದ ಗ್ರಾಮಾಭಿವೃದ್ಧಿ ಕಾರ್ಯ ಯಶಸ್ವಿಯಾಗಿದೆ. ಸಮಸ್ಯೆಗಳಿದ್ದಲ್ಲಿ ಪರಿಹಾರ ಸುಲಭ. ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಪದವಿ ಹಂತದವರೆಗೆ ಪ್ರೋತ್ಸಾಹಧನ ನೀಡಲಾಗುವದು ಎಂದರು.
ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಆದಿತ್ಯ ಗೌಡ, ಸರ್ದಾರ್ ಅಹಮ್ಮದ್, ಸೌಭಾಗ್ಯಲಕ್ಷ್ಮಿ, ಉಷಾ, ರಜನಿ, ಅಭಿವೃದ್ಧಿ ಅಧಿಕಾರಿ ಧನಂಜಯ, ಲೆಕ್ಕ ಸಹಾಯಕ ಶರಣಪ್ಪ ಸನದಿ, ಸಿಬ್ಬಂದಿ ವಸಂತ್, ಫೌಜಿಯಾ ಮತ್ತಿತರರು ಉಪಸ್ಥಿತರಿದ್ದರು.