ಆಲೂರು-ಸಿದ್ದಾಪುರ, ಫೆ. 28: ಆಲೂರು-ಸಿದ್ದಾಪುರ ವ್ಯಾಪ್ತಿಯ ದೊಡ್ಡಕಣಗಾಲು, ಚಿಕ್ಕಕಣಗಾಲು, ದೊಡ್ಡಳ್ಳಿ, ಹಿತ್ಲುಗದ್ದೆ ಮುಂತಾದ ಗ್ರಾಮಗಳಲ್ಲಿ ಕಳೆದ 4 ದಿನಗಳಿಂದ ಕಾಡಾನೆಗಳ ಉಪಟಳದಿಂದ ಈ ಭಾಗದ ರೈತರು ಸಂಕಷ್ಟ ಕ್ಕೀಡಾಗಿದ್ದಾರೆ. ಬಾಣವಾರ ಮೀಸಲು ಅರಣ್ಯದಿಂದ ಬಂದ 3 ಕಾಡಾನೆಗಳು ದೊಡ್ಡಳ್ಳಿ ಗ್ರಾಮದ ಮೂಲಕ ಚಿಕ್ಕ ಕಣಗಾಲು, ದೊಡ್ಡ ಕಣಗಾಲು, ಹಿತ್ಲುಗದ್ದೆ ಮುಂತಾದ ಗ್ರಾಮಗಳ ನಡುವೆ ಸಂಚರಿಸುತಿದ್ದು, ರಾತ್ರಿ ರೈತರು ಹೊಲ ಗದ್ದೆಗಳಲ್ಲಿ ಬೆಳೆದ ಜೋಳ, ಬಾಳೆ ಇನ್ನು ಮುಂತಾದ ಬೆಳೆಗಳನ್ನು ತುಳಿದು ನಷ್ಟ ಪಡಿಸುತ್ತಿರುವದಾಗಿ ಸಂಕಷ್ಟಗೊಳಗಾದ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಮೂರು ಕಾಡಾನೆಗಳ ಹಿಂಡು ದೊಡ್ಡಕಣಗಾಲು ಗ್ರಾಮದ ಪರ್ಲಕೋಟಿ ಹೇಮ್‍ರಾಜ್, ಎಸ್.ಆರ್. ಸೋಮಣ್ಣ, ಕೆ.ಕೆ. ಹೂವಪ್ಪ ಮುಂತಾದವರಿಗೆ ಸೇರಿದ ಜೋಳದ ಹೊಲಕ್ಕೆ ನುಗ್ಗಿ ಜೋಳವನ್ನು ಹಾಗೂ ಬಾಳೆ ಗಿಡಗಳನ್ನು ತುಳಿದು ಧ್ವಂಸಗೊಳಿಸಿದೆ ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತರು ಅರಣ್ಯ ದೂರಿನಲ್ಲಿ ತಿಳಿಸಿದ್ದಾರೆ.