ಶನಿವಾರಸಂತೆ, ಫೆ. 27: ಸಂಕಷ್ಟದಲ್ಲಿರುವ ಹಾಗೂ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ದಿನದ 24 ಗಂಟೆಗಳ ಉಚಿತ ಮತ್ತು ತುರ್ತು ಸೇವೆಯನ್ನು ಕೊಡಗು ಚೈಲ್ಡ್‍ಲೈನ್ ಒದಗಿಸುತ್ತದೆ ಎಂದು ಚೈಲ್ಡ್‍ಲೈನ್ ಸಂಸ್ಥೆ ಸಿಬ್ಬಂದಿ ಡಿ.ಕೆ. ಕುಮಾರಿ, ಚೇತನ್, ಮಾಲಾ ಹಾಗೂ ಶಿಲ್ಪಾ ಹೇಳಿದರು.

ಇತ್ತೀಚೆಗೆ ಪಟ್ಟಣದ ವರ್ಕ್‍ಶಾಪ್, ಅಂಗಡಿ ಹಾಗೂ ಮನೆಮನೆಗೆ ತೆರಳಿ ಕರಪತ್ರಗಳನ್ನು ಹಂಚಿದ ಅವರು ಸಾರ್ವಜನಿಕರಲ್ಲಿ ಬಾಲ ಕಾರ್ಮಿಕ ಕಾಯ್ದೆ ಬಗ್ಗೆ ಹಾಗೂ ಚೈಲ್ಡ್‍ಲೈನ್ ಸೇವೆಯ ಬಗ್ಗೆ ಅರಿವು ಮೂಡಿಸಿದರು.

ಚೈಲ್ಡ್‍ಲೈನ್ ಯೋಜನೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ, ರಾಜ್ಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು, ಬೆಂಬಲಿತ ವ್ಯವಸ್ಥೆ, ಖಾಸಗಿ ಸಂಸ್ಥೆ ಹಾಗೂ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಗುವೊಂದು ಅಸೌಖ್ಯವಾಗಿದ್ದು, ಒಂಟಿ ಯಾಗಿದ್ದಾಗ, ಆಶ್ರಯದ ಅಗತ್ಯತೆಯಿದ್ದಾಗ, ನಿರ್ಗತಿಕ ಹಾಗೂ ಕಾಣೆಯಾದ ಮಗುವನ್ನು ಕಂಡಾಗ, ದೌರ್ಜನ್ಯ ಮತ್ತು ಹಿಂಸೆಗೆ ಒಳಗಾದ ಮಗುವನ್ನು ಕಂಡಾಗ, ಬಾಲಕಾರ್ಮಿಕ ಮತ್ತು ವಿಕಲಚೇತನ ಮಗುವನ್ನು ಕಂಡಾಗ, ಪೋಷಣೆ ಮತ್ತು ಸಂರಕ್ಷಣೆಯ ಅವಶ್ಯವಿರುವ ಎಲ್ಲಾ ಮಕ್ಕಳು ಚೈಲ್ಡ್‍ಲೈನ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಬಾಲಕಾರ್ಮಿಕ ಕಾಯ್ದೆ ತಿದ್ದುಪಡಿ ಕಾಯ್ದೆಯನ್ವಯ ಬಾಲ ಕಾರ್ಮಿಕರಿಂದ ದುಡಿಸಿಕೊಂಡವರು ಹಾಗೂ ನೇಮಿಸಿಕೊಂಡವರು 6ರಿಂದ 3 ವರ್ಷದವರೆಗೆ ಸೆರೆವಾಸ ಮತ್ತು ರೂ.20 ಸಾವಿರದಿಂದ ರೂ.50 ಸಾವಿರದವರೆಗೆ ದಂಡ ಅಥವಾ ಎರಡರಿಂದಲೂ ದಂಡನೆಗೆ ಒಳಗಾಗಬೇಕಾಗುತ್ತದೆ ಎಂದು ಚೈಲ್ಡ್‍ಲೈನ್ ಸಿಬ್ಬಂದಿ ಎಚ್ಚರಿಸಿದರು.